

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿದೆ.
ಇಂದು ಬೆಳಗ್ಗೆಯಷ್ಟೇ ಬೇಗ್ರನ್ನು ಸಿಬಿಐ ವಶಕ್ಕೆ ಪಡೆದಿತ್ತು. ವಿಚಾರಣೆ ಬಳಿಕ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿತ್ತು. ಇದೀಗ ಮಾಜಿ ಶಾಸಕ ರೋಷನ್ ಬೇಗ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ತಳಕು ಹಾಕಿಕೊಂಡಿತ್ತು. ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಬಂಧನಕ್ಕೂ ಮೊದಲೇ ವಿಡಿಯೋ ಹರಿ ಬಿಟ್ಟು, ರೋಷನ್ ಬೇಗ್ ಹಣ ಪಡೆದಿದ್ದಾರೆಂದು ಆರೋಪಿಸಿದ್ದರು. ಈ ಕುರಿತು ಎಸ್ಐಟಿ ಸಹ ರೋಷನ್ ಬೇಗ್ ವಿಚಾರಣೆ ನಡೆಸಿತ್ತು.
ಬಳಿಕ ಇದೇ ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಬೆನ್ನಲ್ಲೆ ರೋಷನ್ ಬೇಗ್ ವಿಚಾರಣೆ ಮುಂದುವರಿಸಿತ್ತು. ಮನ್ಸೂರ್ ಮಾಡಿದ ಆರೋಪಕ್ಕೆ ಪುಷ್ಠಿ ನೀಡುವಂತ ಆಧಾರಗಳು ಸಿಕ್ಕ ಬೆನ್ನಲ್ಲೆ ಸಿಬಿಐ ಇಂದು ಬೆಳಗ್ಗೆ 11.30ಕ್ಕೆ ಬೇಗ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.