More

  ಅನಧಿಕೃತ ಬೋಟಿಂಗ್‌ ಕಠಿಣ ಕ್ರಮಕ್ಕೆ ಮುಂದಾದ ಪ್ರವಾಸೋದ್ಯಮ ಇಲಾಖೆ

  ಕಾರವಾರ: ಕುಮಟಾ, ಗೋಕರ್ಣ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಮತ್ತು ಅನುಮತಿ ಪಡೆದವರನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರವಾಸಿ ಬೋಟಿಂಗ್ ಚಟುವಟಿಕೆಗಳನ್ನು ತಕ್ಷಣದಿಂದ ಬಂದ್ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜೆ.ಜಯಂತ್ ಆದೇಶಿಸಿದ್ದಾರೆ.
  ಭಾನುವಾರ ತದಡಿಯಲ್ಲಿ ಪ್ರವಾಸಿ ಬೋಟ್ ಒಂದು ಮಗುಚಿ 42 ಜನ ಪ್ರವಾಸಿಗರು ಅಘನಾಶಿನಿ ನದಿಯ ಹಿನ್ನೀರಿನಲ್ಲಿ ಬಿದ್ದಿದ್ದರು. ಆದರೆ, ಲೈಫ್ ಜಾಕೆಟ್ ಸಹಾಯದಿಂದ ಎಲ್ಲರೂ ಬಚಾವಾಗಿ ಬಂದಿದ್ದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜೆ.ಜಯಂತ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತಾವು ಕೈಗೊಂಡ ಕ್ರಮಗಳ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ವಿವರಿಸಿದ್ದಾರೆ.
  ಇಲಾಖೆಯಿಂದ ಟೆಂಡರ್ ಪಡೆದವರು ಹಾಗೂ ಅನುಮತಿ ಪಡೆದವರ ಪಟ್ಟಿಯನ್ನು ಕರಾವಳಿ ಕಾವಲುಪಡೆ ಹಾಗೂ ಪೊಲೀಸ್ ಇಲಾಖೆ ಜತೆ ಹಂಚಿಕೊಳ್ಳಲಾಗಿದೆ. ಪಟ್ಟಿಯಲ್ಲಿಲ್ಲದವರನ್ನು ಹೊರತುಪಡಿಸಿ ಉಳಿದೆಲ್ಲರ ಮೇಲೆ ಕ್ರಮ ವಹಿಸುವಂತೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದ್ದಾರೆ.
  ಅಲ್ಲದೆ, ಜಿಲ್ಲೆಯಾದ್ಯಂತ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ಪಡೆಯದವರು ತಕ್ಷಣ ಬೋಟಿಂಗ್ ಚಟುವಟಿಕೆಯನ್ನು ನಿಲ್ಲಿಸಿ, ಅನುಮತಿ ಪಡೆದ ನಂತರವೇ ಮರು ಪ್ರಾರಂಭಿಸಬೇಕು ಎಂದು ಸೂಚಿಸಲಾಗಿದೆ ಎಂದಿದ್ದಾರೆ.
  ಈ ಹಿಂದೆ ಕುಮಟಾ ಹಾಗೂ ಗೋಕರ್ಣ ವ್ಯಾಪ್ತಿಯಲ್ಲಿ ಅನುಮತಿ ಪಡೆದ ಕೆಲ ಪ್ರವಾಸಿ ಬೋಟ್ ಮಾಲೀಕರ ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳ ಕಾಲಾವಧಿ ಮುಕ್ತಾಯವಾಗಿದ್ದು, ಅಂಥವರ ಅನುಮತಿ ಪತ್ರವನ್ನು ತಕ್ಷಣದಿಂದ ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

  ಪ್ರಕರಣ ದಾಖಲು:

  ಇಲ್ಲಿನ ತದಡಿ ಬಂದರಿನ ಅಘನಾಶಿನಿ ಹಿನ್ನೀರಿನಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಸಂಬಂಧ ಬೋಟ್ ಚಾಲಕ ಗಣೇಶ ರಮೇಶ ಮೂಡಂಗಿ ಎನ್ನುವವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋಟ್‌ನಲ್ಲಿದ್ದ ಹಾಸನ ಹೊಳೆನರಸೀಪುರದ ಸುಹಾಸ ಎಚ್.ಆರ್. ಎನ್ನುವವರು ದೂರು ನೀಡಿದ್ದು ಅದರಲ್ಲಿ ನಾವು 11 ಪ್ರಯಾಣಿಕರ ಜತೆ ಇನ್ನೂ 32 ಜನ ಸೇರಿ ಒಟ್ಟೂ 42 ಪ್ರಯಾಣಿಕರನ್ನು ಬೋಟ್‌ನಲ್ಲಿ ಕುಳ್ಳಿರಿಸಿ ಅಘನಾಶಿನಿ ದಡದಿಂದ 300 ಮೀ ದೂರ ಹೋದಾಗ ಬೋಟ್‌ನ ತೂಕ ಹೆಚ್ಚಾದ ಪ್ರಯುಕ್ತ ಬೋಟ್ ಮುಗುಚಿ ಅಪಘಾತ ಪಡಿಸಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.ಅಪಘಾತದ ನಂತರ ಎಲ್ಲ ೪೨ ಪ್ರವಾಸಿಗರೂ ಸುರಕ್ಷಿತವಾಗಿ ದಡಕ್ಕೆ ಸೇರಿದ್ದಾರೆ.ಕರಾವಳಿ ಕಾವಲು ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿಯಿತ್ತು ಸಹಕರಿಸಿದರು.ಪಿಎಸ್‌ಐ ಖಾದರ ಬಾಷಾ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

  https://www.vijayavani.net/18-bull-protection

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts