ಇಳಂತಿಲ ಗ್ರಾ.ಪಂ.ಗೆ ಸೂತಕದ ವರ್ಷ : ಪ್ರಮುಖರಾದ ತಿಮ್ಮಪ್ಪ ಗೌಡ, ಯು.ಕೆ.ಇಸುಬು ಹೇಳಿಕೆ

New Project (18)
Published on

ಉಪ್ಪಿನಂಗಡಿ: ವರ್ಷದೊಳಗೆ ಅಧ್ಯಕ್ಷ ಸಹಿತ ಮೂವರು ಪ್ರಮುಖರನ್ನು ಕಳೆದುಕೊಳ್ಳುವುದರೊಂದಿಗೆ ಇಳಂತಿಲ ಗ್ರಾಮ ಪಂಚಾಯಿತಿಯಲ್ಲಿ ಸೂತಕದ ಛಾಯೆ ಮೂಡಿದ್ದು, ಮುಂದಿನ ಬಾರಿ ಆಡಳಿತ ಚುಕಾಣಿ ಹಿಡಿಯುವ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.

14 ಸದಸ್ಯ ಬಲವಿರುವ ಇಳಂತಿಲ ಗ್ರಾ.ಪಂ ಆಡಳಿತವು ಬಿಜೆಪಿ ತೆಕ್ಕೆಯಲ್ಲಿ ಇದ್ದು, 12 ಮಂದಿ ಬಿಜೆಪಿ ಸದಸ್ಯರು, ತಲಾ ಓರ್ವ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಬೆಂಬಲಿತರು ವಿಜೇತರಾಗಿದ್ದರು. 2024ರಲ್ಲಿ ಬಿಜೆಪಿಯ ರೇಖಾ ನಿಧನರಾಗಿದ್ದು, ಈ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸದಸ್ಯರ ಬಲ 11ಕ್ಕೆ ಕುಸಿಯಿತು. ಇದೇ ವೇಳೆ ದ್ವಿತೀಯ ಅವಧಿಗೆ ಅಧ್ಯಕ್ಷರಾಗಿದ್ದ ತಿಮ್ಮಪ್ಪ ಗೌಡರ ವಿರುದ್ಧ ಅವಿಶ್ವಾಸ ಮಂಡನೆ ನಡೆದು ಮತಬಲವಿಲ್ಲದೆ ಪದಚ್ಯುತಿಗೊಂಡಿದ್ದರು.

ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಬೆಂಬಲದೊಂದಿಗೆ ವಸಂತ್‌ಕುಮಾರ್ ಶೆಟ್ಟಿ ಗೆಲುವು ಪಡೆದಿದ್ದರೂ ಅನಾರೋಗ್ಯಕ್ಕೆ ಒಳಗಾಗಿ ಜು.16ರಂದು ಮೃತಪಟ್ಟರು. ಇದಕ್ಕೂ ಮೊದಲು ಜೂ.21ರಂದು ಗ್ರಾ.ಪಂ ಉಪಾಧ್ಯಕ್ಷ ಸುಪ್ರೀತ್ ಪಾಡೆಂಕಿ ಅನಾರೋಗ್ಯದಿಂದ ನಿಧನರಾಗಿದ್ದು, ವರ್ಷದೊಳಗೆ ಗ್ರಾ.ಪಂ.ನ ಮೂವರು ಪ್ರಮುಖರು ನಿಧನರಾಗಿರುವುದು ಗ್ರಾಮಸ್ಥರಲ್ಲಿ ಕಳವಳ ಉಂಟುಮಾಡಿದೆ ಎಂದು ಇಳಂತಿಲ ಗ್ರಾ.ಪಂ ಮಾಜಿ ಅಧ್ಯಕ್ಷ ತಿಮ್ಮಪ್ಪಗೌಡ, ಹಾಲಿ ಸದಸ್ಯ ಯು.ಕೆ.ಇಸುಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net