

Eye Secure | ಬೇಸಿಗೆ ಬಿಸಿಲಿನ ಶಾಖಕ್ಕೆ ಮನೆಯಿಂದ ಹೊರಗೆ ಬರಲು ಬೇಸರವಾಗುತ್ತದೆ. ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಧೂಳಿನ ಕಾಟ. ಈ ವಾತಾವರಣದಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಮಧ್ಯೆ ಅತ್ಯಂತ ಸೂಕ್ಷ್ಮವಾದ ಕಣ್ಣಿನ ಆರೋಗ್ಯ ಕಾಪಾಡಿಳ್ಳುವುದು ಬಹುಮುಖ್ಯವಾಗುತ್ತದೆ.
ಬೇಸಿಗೆಯಲ್ಲಿ ಸರಿಯಾದ ಕಣ್ಣಿನ ಆರೈಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಏಕೆಂದರೆ ಬೇಸಿಗೆಯಲ್ಲಿ ಕಣ್ಣುಗಳು ಒಣಗುವುದರಿಂದ ಬೇಗನೆ ಅನಾರೋಗ್ಯಕ್ಕೆ ಒಳಗಾಗಬಹುದು. ಯಾವುದೇ ಕಣ್ಣಿನ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಈ ಕೆಳಗೆ ಸೂಚಿಸಿರುವ ಕೆಲ ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಕಣ್ಣುಗಳನ್ನು ರಕ್ಷಿಸಬಹುದಾಗಿದೆ.
ಬೇಸಿಗೆಯಲ್ಲಿ ಬಿಸಿ ಗಾಳಿ ಮತ್ತು ಸೂರ್ಯನ ಶಾಖ ನಮ್ಮ ಕಣ್ಣುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಅನೇಕ ಜನರು ಕಣ್ಣುಗಳಲ್ಲಿ ಉರಿ, ತುರಿಕೆ ಮತ್ತು ಇನ್ನಿತರ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕಣ್ಣಿನ ಹೊರ ಪದರದ ಸುಡುವಿಕೆ ಮತ್ತು ಕಣ್ಣುಗಳಲ್ಲಿ ತೇವಾಂಶದ ಕೊರತೆ ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತವೆ. ಅಂತಹ ಸಂದರ್ಭಗಳಲ್ಲಿ, ನಾವು ನಮ್ಮ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು.
ಈ ಬೇಸಿಗೆಯ ಸಂದರ್ಭದಲ್ಲಿ ನೀವೇನಾದರೂ ಹೊರಗೆ ಹೋದರೆ, ಸನ್ ಗ್ಲಾಸ್ ಧರಿಸುವುದು ಉತ್ತಮ. ಇದು ಸೂರ್ಯನ ಬಲವಾದ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ ಧೂಳು ಮತ್ತು ಕೊಳಕು ಕಣ್ಣುಗಳಿಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಬೇಸಿಗೆಯಲ್ಲಿ ಕಣ್ಣಿನ ನೋವು ಮತ್ತು ಆಯಾಸ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ, ಕಣ್ಣುಗಳನ್ನು ತಂಪಾಗಿಸಲು ದಿನಕ್ಕೆ ಎರಡು ಅಥವಾ ಮೂರು ಬಾರಿ ನಿಮ್ಮ ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯಬೇಕು. ಈರುಳ್ಳಿ ಚೂರುಗಳು ಅಥವಾ ರೋಸ್ ವಾಟರ್ಅನ್ನು ಕಣ್ಣುಗಳಿಗೆ ಹಚ್ಚುವುದು ಒಳ್ಳೆಯದಲ್ಲ.
ಮೊಬೈಲ್ ಫೋನ್, ಲ್ಯಾಪ್ಟಾಪ್ ಅಥವಾ ಟಿವಿಯ ಅತಿಯಾದ ಬಳಕೆಯಿಂದ ಕಣ್ಣಿನಲ್ಲಿ ಆಯಾಸ ಮತ್ತು ಶುಷ್ಕತೆ ಉಂಟಾಗಬಹುದು. ನೀವು ಪರದೆಯ ಮುಂದೆ ಹೆಚ್ಚು ಹೊತ್ತು ಇದ್ದರೆ, ಪ್ರತಿ 20 ನಿಮಿಷಗಳಿಗೊಮ್ಮೆ ಕೆಲವು ಸೆಕೆಂಡುಗಳು ವಿರಾಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಒಣ ಕಣ್ಣಿನ ಸಮಸ್ಯೆ ಉಂಟಾಗುತ್ತದೆ.
ಬೇಸಿಗೆಯಲ್ಲಿ ದೇಹವು ನಿರ್ಜಲೀಕರಣಗೊಳ್ಳುತ್ತದೆ ಹಾಗಾಗಿ ಇದು ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ದಿನವಿಡೀ ಸಾಕಷ್ಟು ನೀರು, ಜ್ಯೂಸ್ ಅಥವಾ ಎಳನೀರನ್ನು ಕುಡಿಯಿರಿ. ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಹಸಿರು ತರಕಾರಿಗಳು, ಕ್ಯಾರೆಟ್, ಮತ್ತು ವಿಟಮಿನ್ ಎ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.
ನಿದ್ರೆಯ ಕೊರತೆಯು ಕಣ್ಣುಗಳಲ್ಲಿ ನೋವು ಮತ್ತು ಊತಕ್ಕೆ ಕಾರಣವಾಗಬಹುದು. ಆದ್ದರಿಂದ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಪೂರ್ಣ ನಿದ್ರೆ ಮಾಡಲು ಪ್ರಯತ್ನಿಸಿ. ಹೆಚ್ಚಿನ ನಿದ್ರೆ ಮಾಡುವುದರಿಂದ ಕಣ್ಣುಗಳು ತಾಜಾವಾಗಿರುತ್ತವೆ. ಹಾಗೂ ಕಣ್ಣಿನ ಇತರ ಸಮಸ್ಯೆಗಳು ನಿವಾರಣೆಯಾಗುತ್ತವೆ.
(ಏಜೆನ್ಸೀಸ್)