ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ 2 ವರ್ಷ ಪತಿ ನಾಪತ್ತೆ! 1 ಕೋಟಿ ಬಿಲ್​ಗಾಗಿ ಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಸ್ಪತ್ರೆ; Viral news

hospital
Published on

ಕೋಲ್ಕತ್ತಾ: ಅಪಘಾತವಾದ ಪತ್ನಿಯನ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಪತಿ ನಾಪತ್ತೆಯಾಗಿದ್ದು, ಎರಡು ವರ್ಷವಾದರೂ ಸಹ ಆತ ಆಸ್ಪತ್ರೆಯ ಬಳಿ ತಿರುಗಿಯೂ ನೋಡಿಲ್ಲ. ಇನ್ನೂ ಎರಡು ವರ್ಷವಾದರೂ ಮರಳಿ ಬಾರದ ಪತಿ ವಿರುದ್ಧ ಅಪೋಲೋ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೀಗ ಕೋಟ್ಯಂತರ ರೂಪಾಯಿಗಳ ಬಿಲ್‌ಗಾಗಿ ಕೋರ್ಟ್ ಮೆಟ್ಟಿಲೇರಿದೆ.

ಏನಿದು ಪ್ರಕರಣ?

ಭೀಕರ ಅಪಘಾತದಿಂದಾಗಿ ಮಹಿಳೆಯ ದೇಹದ ಕೆಳಭಾಗ ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಗಿತ್ತು. ಜೊತೆಗೆ ಆಕೆ ತನ್ನ ಮಾತನ್ನು ಸಹ ಕಳೆದುಕೊಂಡಿದ್ದರು. 40 ವರ್ಷದ ವಯಸ್ಸಿನ ಮಹಿಳೆಯನ್ನು ಸೆಪ್ಟೆಂಬರ್ 2021 ರಲ್ಲಿ ಅವರ ಪತಿ ಈಕೆಯ ತಲೆಗೆ ಗಾಯವಾದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮಹಿಳೆಗೆ ಜೀವ ಉಳಿಸುವ ನರಶಸ್ತ್ರಚಿಕಿತ್ಸೆ ಸೇರಿದಂತೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಇದನ್ನು ನೋಡಿದ ಆಕೆಯ ಗಂಡ ಅವಳನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ತನ್ನ ಪಾಡಿಗೆ ತಾನು ಜೀವನ ಮಾಡುತ್ತಿದ್ದ. ಆದರೆ ಇದೀಗ ನ್ಯಾಯಾಲಯದ ಮುಂದೆ ಆತ ಹಾಜರಾಗಿದ್ದಾನೆ.

ನ್ಯಾಯಾಲಯಕ್ಕೆ ಹಾಜರಾದ ಪತಿಯನ್ನು ನ್ಯಾಯಾಧೀಶರಾದ ಅಮೃತಾ ಸಿನ್ಹಾ ಅವರು ಪ್ರಶ್ನಿಸಿದ್ದು, ಏಕೆ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪತಿ, ನಾನು ಅಂಗಡಿಯೊಂದರ ಮಾಲೀಕನಾಗಿದ್ದು, ನನ್ನ ಪತ್ನಿ ಅಪಘಾತದಿಂದಾಗಿ ಅಂಗವಿಕಲೆಯಾದ ಕಾರಣ ಅವಳನ್ನು ನೋಡಿಕೊಳ್ಳುವ ಶಕ್ತಿ ಹಾಗೂ ಸಾಮರ್ಥ್ಯ ನನ್ನ ಬಳಿ ಇರಲಿಲ್ಲ ಎಂಬ ಉತ್ತರ ನೀಡಿದ್ದಾನೆ.

ಇನ್ನೂ ಈ ಪ್ರಕರಣದ ಬಗ್ಗೆ ನ್ಯಾಯಾಧೀಶರಾದ ಸಿನ್ಹಾ ಅವರು ವಿಚಾರಣೆ ನಡೆಸುತ್ತಿದ್ದು, ಏಪ್ರಿಲ್ 9 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಮತ್ತೊಂದೆಡೆ ಈತನ ಬಗ್ಗೆ ಅಪೊಲೊ ಆಸ್ಪತ್ರೆ ಪರ ವಕೀಲರು ನ್ಯಾಯಾಲಯದಲ್ಲಿ ಮಾತನಾಡಿದ್ದು, ಆಸ್ಪತ್ರೆಯು ಆಕೆಗೆ ಎರಡು ವರ್ಷಗಳ ಕಾಲ ಚಿಕಿತ್ಸೆ ನೀಡಿದೆ, ಆಕೆಗೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ ಮತ್ತು ಆಕೆಯ ಬಳಿ 6 ಲಕ್ಷ ರೂ. ವಿಮಾ ಮೊತ್ತ ಇತ್ತು. ಅದನ್ನೂ ಸಹ ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ 1 ಕೋಟಿ ರೂ. ಹಣ ಹಾಗೂ ರೋಗಿಯ ಜವಾಬ್ದಾರಿಯನ್ನ ಆಸ್ಪತ್ರೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಆಕೆಯ ಪತಿ ಬೇರೆ ಕುಟುಂಬವನ್ನು ಶುರು ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಆಸ್ಪತ್ರೆ ಪರ ವಕೀಲರು ಆರೋಪಿಸಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net