ನಿಮ್ಮ ಮಗಳು ಹಿಂದೂ ಅಲ್ಲದೇ ಅನ್ಯಧರ್ಮದವರನ್ನು ಭೇಟಿ ಮಾಡಿದ್ರೆ ಅವಳ ಕಾಲು ಮುರಿಯಿರಿ; ಪ್ರಜ್ಞಾ ಠಾಕೂರ್|Pragya Thakur

ವಿಜಯವಾಣಿ (74)
Published on

Bhopal : ಮಾಲೆಗಾಂವ್​ ಬಾಂಬ್ ಸ್ಫೋಟದ ಆರೋಪ ಹೊತ್ತು ಇತ್ತೀಚೆಗೆ ಕೋರ್ಟ್​ನಿಂದ ಖುಲಾಸೆಗೊಂಡಿರುವ ಬಿಜೆಪಿಯ ಭೋಪಾಲ್​ನ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್(Pragya Thakur), ಹಿಂದೂಗಳನ್ನು ತಮ್ಮ ಮನೆಯ ಮಗಳು ಹಿಂದೂ ಅಲ್ಲದೇ ಅನ್ಯಧರ್ಮದವರನ್ನು ಭೇಟಿ ಮಾಡಿದ್ರೆ ಅವಳ ಕಾಲು ಮುರಿಯಿರಿ ಎಂದು ಹೇಳಿದ್ದು ಭಾನುವಾರ(ಅ. 19) ರಾಜಕೀಯ ವಿವಾದದ ಕಿಡಿ ಹೊತ್ತಿಸಿದೆ.

ಈ ತಿಂಗಳ ಆರಂಭದಲ್ಲಿ ಭೋಪಾಲ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಡಿಯೋ ಬಹಿರಂಗಗೊಂಡಿದ್ದು, ಅದರಲ್ಲಿ ಪೋಷಕರು ತಮ್ಮ ಹೆಣ್ಣುಮಕ್ಕಳು ಅನ್ಯಧರ್ಮದವರ ಮನೆಗೆ ಹೋಗುವುದನ್ನು ತಡೆಯಬೇಕು. ನಿಮ್ಮ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದರೆ ಕಾಲು ಮುರಿಯಲು ಯೋಚಿಸಬೇಡಿ. ಮೌಲ್ಯಗಳನ್ನು ಪಾಲಿಸದ, ಪೋಷಕರ ಮಾತನ್ನು ಕೇಳದವರಿಗೆ ಶಿಕ್ಷೆಯಾಗಬೇಕು. ನಿಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಹೊಡೆಯಬೇಕಾದರೆ ಹಿಂದೆ ಸರಿಯಬೇಡಿ ಎಂದು ಕರೆ ನೀಡಿದ್ದಾರೆ.

ಮೌಲ್ಯಗಳನ್ನು ಪಾಲಿಸದ, ಪೋಷಕರ ಮಾತನ್ನು ಕೇಳದ, ಹಿರಿಯರನ್ನು ಗೌರವಿಸದ ಹಾಗೂ ಮನೆಯಿಂದ ಓಡಿಹೋಗಲು ಸಿದ್ಧರಾಗಿರುವ ಹುಡುಗಿಯರ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಅವರು ನಿಮ್ಮ ಮನೆಗಳಿಂದ ಹೊರಬರಲು ಬಿಡಬೇಡಿ. ಹೊಡೆಯುವ ಮೂಲಕ ಪರಿಸ್ಥಿತಿ ವಿವರಿಸಿ, ಸಮಾಧಾನಪಡಿಸಿ, ಬೈಯ್ಯಿರಿ ಒಟ್ಟಿನಲ್ಲಿ ಅವರು ಹೋಗುವುದನ್ನು ತಡೆಯಿರಿ ಎಂದು ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನೂ ಪ್ರಜ್ಞಾ ಸಿಂಗ್ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್, ಬಿಜೆಪಿ ಸಮಾಜದಲ್ಲಿ ವಿಷಬೀಜ ಬಿತ್ತಲು, ದ್ವೇಷ ಹರಡುತ್ತಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಮಾತನಾಡಿ, ಮಧ್ಯಪ್ರದೇಶದಲ್ಲಿ ಕೇವಲ ಏಳು ಧಾರ್ಮಿಕ ಮತಾಂತರ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದಾಗ ಇಷ್ಟೊಂದು ಸದ್ದು ಮತ್ತು ದ್ವೇಷ ಹರಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net