

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಲೋನ್ ಮೊರಟೋರಿಯಂ ಅವಧಿಯನ್ನು ಇನ್ನೂ ಮೂರು ತಿಂಗಳಿಗೆ ಅಂದರೆ ಆಗಸ್ಟ್ 31ರ ತನಕ ವಿಸ್ತರಿಸಿರುವುದಾಗಿ ಘೋಷಿಸಿದೆ. ಲೋನ್ ಮೊರಟೋರಿಯಂ ಅವಧಿ ಎಂದರೆ ಸಾಲಗಾರ ಈ ಅವಧಿಯಲ್ಲಿ ಸಾಲದ ಕಂತನ್ನು ಮರುಪಾವತಿಸಬೇಕಾಗಿಲ್ಲ. ಕರೊನಾ ಲಾಕ್ ಡೌನ್ ಘೋಷಣೆ ವೇಳೆ ಆರ್ಬಿಐ ಮಾರ್ಚ್ 1ರಿಂದ ಮೇ 31ರ ಅವಧಿಗೆ ಮೊದಲ ಬಾರಿ ಲೋನ್ ಮೊರಟೋರಿಯಂ ಘೋಷಿಸಿತ್ತು.
ಇದನ್ನೂ ಓದಿ: ಶಾಲೆಗಳ ಆರಂಭ ಅಧ್ಯಯನಕ್ಕೆ ಸಮಿತಿ
ಅಲ್ಪಾವಧಿಯ ನಗದು ಆದಾಯ ಹೊಂದಿರುವವರಿಗೆ ಆದಾಯ ಕುಂಟಿತವಾಗಿದೆ. ಹೀಗಾಗಿ ಲೋನ್ ಮೊರಟೋರಿಯಂ ಅವರಿಗೆ ಪ್ರಯೋಜಕ್ಕೆ ಬಂದೀತು. ಹೀಗಾಗಿ, ಆರ್ಬಿಐ ಘೋಷಿಸಿರುವ ಲೋನ್ ಮೊರಟೋರಿಯಂ ಅವಧಿಯ ಪ್ರಯೋಜನವನ್ನು ಹೊಂದಲು ನೀವು ಬಯಸುತ್ತೀರಾದರೆ ಕೆಲವು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳುವುದು ಅವಶ್ಯ.
ಮುಂದಿನ ಮೂರು ತಿಂಗಳ ಅವಧಿಗೆ ನಿಮ್ಮ ಮನೆ ಸಾಲ ಅಥವಾ ವಾಹನ ಸಾಲದ ಕಂತುಗಳನ್ನು ಪಾವತಿಸದೇ ಇರಲು ನಿರ್ಧರಿಸಿದರೆ ಸಾಲದ ಒಟ್ಟು ಮೊತ್ತ ಹೆಚ್ಚಾಗಿ ಅದಕ್ಕೂ ಬಡ್ಡಿ ಪಾವತಿಸಬೇಕಾಗುತ್ತದೆ. ಇದರಿಂದ ಬಡ್ಡಿಯ ಹೊರೆ ಹೆಚ್ಚಾಗುತ್ತದೆ. ಒಂದೊಮ್ಮೆ ಮೊರಟೋರಿಯಂ ಅವಧಿಯಲ್ಲಿ ಸಾಲದ ಕಂತುಗಳನ್ನು ಕಟ್ಟದೇ ಇದ್ದರೆ ಬ್ಯಾಂಕುಗಳು ಈ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿಯನ್ನೇನೂ ಮನ್ನಾ ಮಾಡುವುದಿಲ್ಲ. ಬದಲಾಗಿ ಬಡ್ಡಿ ಲೆಕ್ಕ ಹಾಕಿ ಸಾಲದ ಹೊರೆ ಹೆಚ್ಚಿಸುತ್ತದೆ. ಇದು ಮುಂದಿನ ಇಎಂಐಗಳ ಮೇಲೆ ಪರಿಣಾಮ ಬೀರುವುದಲ್ಲದೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ ನೀವು 1,000 ರೂಪಾಯಿ ಇಎಂಐ ಕಂತು ಪಾವತಿಸುತ್ತಿದ್ದು, ಶೇಕಡ 10 ಬಡ್ಡಿ ದರ ಇದೆ ಎಂದು ಊಹಿಸಿಕೊಳ್ಳಿ. ಮೊರಟೋರಿಯಂ ಅವಧಿ ಎಂದು ಮೂರು ತಿಂಗಳು ಇಎಂಐ ಕಂತು ಪಾವತಿಸುವುದಿಲ್ಲ. ಆಗ ಪ್ರತಿ ಇಎಂಐ ಮೇಲೆ 25 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಬಡ್ಡಿದರ ಒಂದೋ ನಿಮ್ಮ ಭವಿಷ್ಯದ ಇಎಂಐಗಳಿಗೆ ಸೇರ್ಪಡೆಯಾಗಬಹುದು ಅಥವಾ ನಿಮ್ಮ ಇಎಂಐ ಕಂತು ಈಗಿರುವುದೇ ಇದ್ದಲ್ಲಿ ಸಾಲ ಮರುಪಾವತಿಯ ಅವಧಿ ಅಥವಾ ಕಂತು ಸ್ವಲ್ಪ ಹೆಚ್ಚಾಗಬಹುದು. (ಏಜೆನ್ಸೀಸ್)