ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತೇವೆ: ಅಮಿತ್​ ಷಾ

Amit Shah
Published on

ಪುದುಚೇರಿ: ಯುವ ಜನಾಂಗವು ಎನ್​ಡಿಎಗೆ ಮತ ಚಲಾಯಿಸಿದರೆ ನಮ್ಮ ಸರ್ಕಾರವು ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್​ ಷಾ ಹೇಳಿದರು.

ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರಾಡಳಿ ಪ್ರದೇಶ ಪುದುಚೇರಿ ಪ್ರವಾಸದಲ್ಲಿರುವ ಅಮಿತ್​ ಷಾ ಅವರು ಇಂದು ಕಾರೈಕಲ್​ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಹಿಂದಿನ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದ ಷಾ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಸಣ್ಣತನದ ರಾಜಕೀಯವನ್ನು ಪ್ರದರ್ಶಿಸಿತು ಎಂದು ಕಿಡಿಕಾರಿದರು.

ಮುಂದಿನ ಬಾರಿ ಪುದುಚೇರಿಯಲ್ಲಿ ಎನ್​ಡಿಎ ಸರ್ಕಾರ ರಚನೆ ಮಾಡಲಿದೆ. ಕೇವಲ ಪುದುಚೇರಿ ಮಾತ್ರವಲ್ಲ, ಇಡೀ ದೇಶದಲ್ಲಿ ಎನ್​ಡಿಎ ಬರಲಿದೆ. ಅನೇಕ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ. ಏಕೆಂದರೆ ಅರ್ಹತೆಗೆ ಕಾಂಗ್ರೆಸ್​ನಲ್ಲಿ ಬೆಲೆ ಇಲ್ಲ ಎಂದರು.

ಕೇವಲ 30 ವಿಧಾನಸಭೆ ಸ್ಥಾನಗಳನ್ನು ಪುದುಚೇರಿ ಹೊಂದಿದೆ. ಏಪ್ರಿಲ್​ನಲ್ಲಿ ಕೇವಲ ಒಂದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಕೆಲವು ದಿನಗಳ ಹಿಂದಷ್ಟೇ ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬಹುಮತ ಕೊರತೆಯಿಂದ ಕುಸಿಯಿತು. ಸದ್ಯ ಪುದುಚೇರಿ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net