ಬೆಂಗಳೂರಲ್ಲಿ ಈ ಚಿಕ್ಕ ಫ್ಲ್ಯಾಟ್​ನ ಬಾಡಿಗೆ ಮೊತ್ತಾ ಇಷ್ಟೊಂದಾ? ಯುವಕನ ಮಾತು ಕೇಳಿ ದಂಗಾದ್ರು ನೆಟ್ಟಿಗರು! Bengaluru

Bengaluru
Published on

Bengaluru : ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅನೇಕ ಯುವಕರು ಉದ್ಯೋಗವನ್ನು ಅರಸಿ ಹೋಗುವ ಪ್ರಮುಖ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಈ ನಗರದಲ್ಲಿ ಐಟಿ ಮತ್ತು ಇಂಜಿನಿಯರಿಂಗ್ ಉದ್ಯೋಗಾವಕಾಶಗಳು ಹೇರಳವಾಗಿವೆ. ನೆಮ್ಮದಿಯುತ ಜೀವನ ನಡೆಸಲು ಎಲ್ಲಾ ರೀತಿಯಲ್ಲೂ ಬೆಂಗಳೂರು ಅನುಕೂಲಕರವಾಗಿದೆ.

ಉತ್ತಮ ಜೀವನ ನಡೆಸಲು ಬೆಂಗಳೂರು ಬೆಸ್ಟ್​ ಏನೋ ಸರಿ ಆದರೆ, ಇತ್ತೀಚಗೆ ಬೆಂಗಳೂರು ಬಲು ದುಬಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕನೊಬ್ಬ ಹಂಚಿಕೊಂಡಿರುವ ವಿಡಿಯೋ ತಾಜಾ ಸಾಕ್ಷಿಯಾಗಿದೆ. ಯುವಕನ ವಿಡಿಯೋ ವೈರಲ್​ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಬೆಂಗಳೂರು ಇಷ್ಟೊಂದು ದುಬಾರಿನಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಬೆಂಗಳೂರಿನಲ್ಲಿ ವಾಸವಿರುವ ಯುವಕನೊಬ್ಬ ತಾನಿರುವ ಫ್ಲ್ಯಾಟ್ ಮತ್ತು ಆ ಫ್ಲ್ಯಾಟ್​ಗೆ ಆತ ಪಾವತಿಸುವ ಬಾಡಿಗೆಯ ಬಗ್ಗೆ ಮಾತನಾಡಿದ್ದಾನೆ. ಒಂದೇ ಒಂದು ರೂಮ್​ ಇರುವ ಫ್ಲ್ಯಾಟ್​ಗೆ ತಿಂಗಳಿಗೆ 25,000 ರೂಪಾಯಿ ಬಾಡಿಗೆ ಪಾವತಿಸುತ್ತಿರುವುದಾಗಿ ಹೇಳಿದ್ದಾನೆ. ವಿಡಿಯೋದಲ್ಲಿ ಯುವಕ ಒಂದು ಕೋಣೆಯ ಒಳಗೆ ನಿಂತು ಮಾತನಾಡುತ್ತಿದ್ದಾನೆ. ಆ ಕೋಣೆಯ ಅಗಲ ಯುವಕನ ಎರಡು ಚಾಚಿದ ತೋಳುಗಳಷ್ಟು ಮಾತ್ರ ಇದೆ. ಕೋಣೆಯ ಉದ್ದ ಅವನು ಚಾಚಿದ ಕಾಲು ಮತ್ತು ಕೈಗಳ ಉದ್ದದಷ್ಟು ಮಾತ್ರ ಇದೆ. ಇದರ ಜೊತೆಗೆ ಆ ಫ್ಲ್ಯಾಟ್ ಒಂದು ಸಣ್ಣ ಬಾಲ್ಕನಿಯನ್ನು ಸಹ ಹೊಂದಿದೆ. ಇಷ್ಟು ದೊಡ್ಡ ಮೊತ್ತದ ಬಾಡಿಗೆ ಪಾವತಿಸಿದರೂ ಆತನಿಗೆ ಇಂಥಾ ಕೆಟ್ಟ ಫ್ಲ್ಯಾಟ್ ಸಿಕ್ಕಿದೆಯೇ ಎಂದು ಅನೇಕರು ಜಾಲತಾಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಇಷ್ಟೊಂದು ದುಬಾರಿ ಆಗೋಯ್ತಾ? ಮಧ್ಯಮ ವರ್ಗದವರ ಗತಿ ಏನು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಇದಕ್ಕೂ ಮೊದಲು, ಮುಂಬೈನಲ್ಲಿ ಇದೇ ರೀತಿಯ ಬಾಡಿಗೆ ನೀಡುತ್ತಿರುವ ಫ್ಲ್ಯಾಟ್​ ಬಗ್ಗೆ ಯುವಕನೊಬ್ಬ ವಿಡಿಯೋ ಹಂಚಿಕೊಂಡಿದ್ದ. ಇದು ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಮಾಟುಂಗಾದಲ್ಲಿ ಒಂದು ಕೋಣೆಯ ಫ್ಲ್ಯಾಟ್​ಗೆ ಆ ಯುವಕ ಪಾವತಿಸುತ್ತಿದ್ದ ಬಾಡಿಗೆ 40,000 ರೂಪಾಯಿ. ಬೆಂಗಳೂರು ಮತ್ತು ಮುಂಬೈನಂತಹ ನಗರಗಳಲ್ಲಿ ಹೆಚ್ಚಿನ ಬಾಡಿಗೆ ಮತ್ತು ಜೀವನ ವೆಚ್ಚದ ಬಗ್ಗೆ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net