'ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು': ಎಚ್‌ಡಿಕೆ

hdk
Published on

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಆರೋಪದ ಕುರಿತು ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿರುವುದು ಗಮನಕ್ಕೆ ಬಂದಿದೆ. ಎಸ್ಐಟಿ ತನಿಖೆ ಪೂರ್ಣಗೊಳ್ಳಲಿ. ಸತ್ಯಾಂಶ ಏನು ಎಂಬುದು ಹೊರಬರಲಿ ಎಂದರು.

ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತಪ್ಪು ಮಾಡಿದವರನ್ನು ನಾವು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ನಾನಾಗಲೀ, ಎಚ್.ಡಿ.ದೇವೇ ಗೌಡರಾಗಲೀ ಸಂಕಷ್ಟ ಹೇಳಿಕೊಂಡು ಬಂದ ಮಹಿಳೆಯರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದೇವೆ. ಮಹಿಳೆಯರ ಬಗ್ಗೆ ಸದಾ ಗೌರವದ ಭಾವನೆ ಹೊಂದಿದ್ದೇವೆ ಎಂದು ಹೇಳಿದರು.

ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಪ್ರಶ್ನಿಸಿದಾಗ, ಪ್ರಜ್ವಲ್ ವಿದೇಶಕ್ಕೆ ಹೋಗಿರುವುದಕ್ಕೂ ನನಗೂ ಸಂಬಂಧ ಇಲ್ಲ. ಅವರು ತಪ್ಪಿಸಿಕೊಂಡಿದ್ದರೆ ಎಸ್ಐಟಿ ಅಧಿಕಾರಿಗಳು ಪತ್ತೆಹಚ್ಚಿ ಕರೆತರಲಿ. ಅದಕಾಗಿಯೇ ನೇಮಿಸಿರುವ ಅಧಿಕಾರಿಗಳಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net