

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ನಾನೇನಾದರೂ ಆ ತಂಡದ ಕೋಚ್ ಅಥವಾ ಮೆಂಟರ್ ಆಗಿದ್ದರೆ ಆ ಆಟಗಾರನನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುತ್ತಿರಲಿಲ್ಲ ಎಂದು ವೀರೂ ಹೇಳಿದ್ದಾರೆ.
ಅಷ್ಟಕ್ಕೂ ಸೆಹ್ವಾಗ್ ಅವರು ಯಾರ ಬಗ್ಗೆ ಹೇಳಿದರು ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅವರೇ ಟೀಮ್ ಇಂಡಿಯಾದ ಸೂಪರ್ ಸೀನಿಯರ್ ಬೌಲರ್ ಆಗಿರುವ ರವಿಚಂದ್ರನ್ ಅಶ್ವಿನ್. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಅಶ್ವಿನ್, ತಮ್ಮ ಬೌಲಿಂಗ್ನಲ್ಲಿ ಕಡಿಮೆ ರನ್ ನೀಡುತ್ತಿದ್ದರೂ ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಸೆಹ್ವಾಗ್ ಅವರು ಅಶ್ವಿನ್ ಬಗ್ಗೆ ಕಟುವಾದ ಕಾಮೆಂಟ್ಗಳನ್ನು ಮಾಡಿದ್ದಾರೆ.
ಅಶ್ವಿನ್ ಅವರು ವಿಕೆಟ್ ಕಬಳಿಸದೇ ಇದ್ದರೆ ಮುಂದಿನ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡ ಅವರನ್ನು ಖರೀದಿಸುವುದಿಲ್ಲ ಮತ್ತು ಅವರು ಮಾರಾಟವಾಗದ ಆಟಗಾರನಾಗಿ ಉಳಿಯುತ್ತಾರೆ ಎಂದು ವೀರೂ ಟೀಕಿಸಿದರು. ಈ ಸೀಸನ್ನಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿರುವ ಅಶ್ವಿನ್ ಎರಡು ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ. ಒಟ್ಟು 31 ಓವರ್ ಎಸೆದಿರುವ ಅಶ್ವಿನ್, 279 ರನ್ ನೀಡಿದ್ದಾರೆ. ಹಿರಿಯ ಸ್ಪಿನ್ನರ್ ಆಗಿ ಅಶ್ವಿನ್ ಅವರು ನೀಡಬೇಕಿದ್ದ ಪ್ರದರ್ಶನ ಇದಲ್ಲ ಎನ್ನುವ ಮೂಲಕ ಸೆಹ್ವಾಗ್, ಅಶ್ವಿನ್ ಅವರ ಪ್ರದರ್ಶನದ ಬಗ್ಗೆ ಲೇವಡಿ ಮಾಡಿದರು. ಸದ್ಯ ಸೆಹ್ವಾಗ್ ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀರೂ ನೇರವಾಗಿ ಮಾತನಾಡಿರುವುದು ಕೆಲ ಕ್ರಿಕೆಟ್ ಅಭಿಮಾನಿಗಳಿಗೂ ಇಷ್ಟವಾಗಿಲ್ಲ.
ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ರನ್ ಮಳೆ ಹರಿಯುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬೌಲರ್ಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಅದರಲ್ಲೂ ಸ್ಪಿನ್ನರ್ಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ರಶೀದ್ ಖಾನ್ ಅವರಂತಹ ಸ್ಪಿನ್ನರ್ ಕೂಡ ಈ ಐಪಿಎಲ್ ಸೀಸನ್ನಲ್ಲಿ ಹೆಚ್ಚು ಪ್ರಭಾವ ಬೀರುತ್ತಿಲ್ಲ. ಅಶ್ವಿನ್ ಅವರ 9ರ ಎಕಾನಮಿ ಉತ್ತಮ ಎಂಬಂತೆ ತೋರಿದರೂ ವಿಕೆಟ್ ಪಡೆಯುವಲ್ಲಿ ಕೊಂಚ ಹಿಂದೆ ಬಿದ್ದಿದ್ದಾರೆ. ಆದರೆ, ಈ ಒಂದು ಸೀಸನ್ನಿಂದ ಅಶ್ವಿನ್ ಲೆವೆಲ್ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿಗಳು.
ಅಶ್ವಿನ್ ಸಾಮರ್ಥ್ಯಕ್ಕೆ ಐಪಿಎಲ್ ಹರಾಜು ಮಾನದಂಡವಲ್ಲ, ಟೀಮ್ ಇಂಡಿಯಾದ ಅತ್ಯುತ್ತಮ ಬೌಲರ್ಗಳಲ್ಲಿ ಅಶ್ವಿನ್ ಕೂಡ ಒಬ್ಬರು ಎಂದು ಅಭಿಮಾನಿಗಳು ಅಶ್ವಿನ್ ಅವರನ್ನು ಸಮರ್ಥಿಸಿಕೊಂಡಿದ್ದು, ವೀರೂ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. (ಏಜೆನ್ಸೀಸ್)