Amit Shah | ಪಾಕಿಸ್ತಾನದ ಭಯೋತ್ಪಾದಕರು ಭಾರತದ ಮೇಲೆ ಮತ್ತೆ ದಾಳಿ ಮಾಡಿದರೆ, ಗುಂಡಿಗೆ ಉತ್ತರವಾಗಿ ಫಿರಂಗಿಗಳನ್ನು ನುಗ್ಗಿಸುತ್ತೇವೆ : ಪಾಕ್​ಗೆ ಅಮಿತ್ ಷಾ ಎಚ್ಚರಿಕೆ

Amit Shah
Published on

ಪಾಟ್ನಾ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಭಾರತದ ಮೇಲೆ ಮತ್ತೆ ದಾಳಿ ಮಾಡಿದರೆ, ಗುಂಡಿಗೆ ಉತ್ತರ ಗುಂಡುಗಳಿಂದಲೇ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಮಂಗಳವಾರ (ನ.04) ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಚುನಾವಣಾ ಱಲಿಯಲ್ಲಿ ಮಾತನಾಡಿದ ಷಾ, ಬಿಹಾರದ ಪ್ರಸ್ತಾವಿತ ರಕ್ಷಣಾ ಕಾರಿಡಾರ್‌ನಲ್ಲಿ ತಯಾರಾದ ಸ್ಫೋಟಕಗಳನ್ನು ಪಾಕ್​ ಭಯೋತ್ಪಾದಕರ ವಿರುದ್ಧ ಬಳಸಲಾಗುವುದು ಎಂದಿದ್ದಾರೆ.

ಪಾಕಿಸ್ತಾನದ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ನಮ್ಮ ನಾಗರಿಕರ ಮೇಲೆ ದಾಳಿ ಮಾಡಿದರು. ಉಗ್ರರು ನಮ್ಮ ತಾಯಂದಿರು ಮತ್ತು ಸಹೋದರಿಯರ ಹಣೆಯಿಂದ ಸಿಂಧೂರವನ್ನು ಅಳಿಸಿಹಾಕಿದರು. ಅದರೆ, ಪ್ರಧಾನಿ ನರೇಂದ್ರ ಮೋದಿ 20 ದಿನಗಳಲ್ಲಿ ಆಪರೇಷನ್ ಸಿಂಧೂರವನ್ನು ಪ್ರಾರಂಭಿಸುವ ಮೂಲಕ ಸೇಡು ತೀರಿಸಿಕೊಂಡರು. ಭಾರತೀಯ ಸೇನೆಯು ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರನ್ನು ತಟಸ್ಥಗೊಳಿಸಿತು ಎಂದು ಷಾ ಹೇಳಿದ್ದಾರೆ.

ಪ್ರಧಾನಿಯವರು ಬಿಹಾರದಲ್ಲಿ ರಕ್ಷಣಾ ಕಾರಿಡಾರ್​ನ್ನು ಸ್ಥಾಪಿಸುತ್ತಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ತಮ್ಮ ತಪ್ಪನ್ನು ಪುನರಾವರ್ತಿಸಿದರೆ, ಗುಂಡಿಗೆ ಉತ್ತರ ಗುಂಡೇ ಆಗಿರುತ್ತದೆ. ಭಯೋತ್ಪಾದಕರ ವಿರುದ್ಧ ಬಳಸಲಾಗುವ ಫಿರಂಗಿಗಳನ್ನು ಬಿಹಾರದಲ್ಲಿ ತಯಾರಿಸಲಾಗಿದೆ ಎಂದು ಷಾ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಷಾ, ಹಿಂದಿನ ಕಾಂಗ್ರೆಸ್ ಆಡಳಿತಕ್ಕಿಂತ ಭಿನ್ನವಾಗಿ, ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರದ ಸುರಕ್ಷತೆ ಮತ್ತು ಭದ್ರತೆಗೆ ಬದ್ಧವಾಗಿದೆ ಎಂದಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿಯ 15 ವರ್ಷಗಳ ಆಳ್ವಿಕೆಯಲ್ಲಿ ಸಿವಾನ್‌ನಲ್ಲಿ ಭಯೋತ್ಪಾದನೆಯನ್ನು ಬಿಚ್ಚಿಟ್ಟ ದರೋಡೆಕೋರ ರಾಜಕಾರಣಿಯಾಗಿ ಬದಲಾದ ಮೊಹಮ್ಮದ್ ಶಹಾಬುದ್ದೀನ್​ನನ್ನು ಹೊಗಳುವ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಪುತ್ರ ತೇಜಸ್ವಿ ಯಾದವ್ ವಿರುದ್ಧ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲಾಲು ಪಕ್ಷವು ಶಹಾಬುದ್ದೀನ್ ಅಮರ್ ರಹೇ, ಜಂಗಲ್ ರಾಜ್' ಕನಸು ಮುಂತಾದ ಘೋಷಣೆಗಳನ್ನು ಕೂಗುತ್ತದೆ. ಆದರೆ ಬಿಹಾರ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಬಿಹಾರವನ್ನು ಧ್ವಂಸಗೊಳಿಸಿದ ಆರ್‌ಜೆಡಿ ಆಳ್ವಿಕೆಯ ಅವಧಿಯಲ್ಲಿ ಜಂಗಲ್ ರಾಜ್ ಮರಳುವುದನ್ನು ತಡೆಯಲು ಬಿಹಾರದ ಮತದಾರರನ್ನು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಷಾ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net