

ಮೆಲ್ಬೋರ್ನ್: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್ ಎಂದೇ ಕ್ರೀಡಾ ಲೋಕದಲ್ಲಿ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ದಾಖಲೆಗಳ ಸರದಾರ ಎಂದರೆ ತಪ್ಪಾಗಲಾರದು. ನಿರ್ಣಾಯಕ ಬಾರ್ಡರ್-ಗವಾಸ್ಕರ್ ಟ್ರೋಫಿ ಸೇರಿದಂತೆ ಇತರೆ ಟೆಸ್ಟ್ ಸರಣಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದು, ತೀವ್ರ ಟೀಕೆಗೆ ಗುರಿಯಾಗಿರುವ ನಡುವೆಯೇ ವಿರಾಟ್ ಕೊಹ್ಲಿ ಸಚಿನ್ಗಿಂತ ಶ್ರೇಷ್ಠ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ನ ಕಾಮೆಂಟರಿ ವೇಳೆ ಈ ಬಗ್ಗೆ ಮಾತನಾಡಿದ ಜಸ್ಟಿನ್ ಲ್ಯಾಂಗರ್ (Justin Langer), ವಾಸ್ತವವಾಗಿ ಹೇಳಬಬೇಕೆಂದರೆ ನಾನು ನೋಡಿದ ಅತ್ಯುತ್ತಮ ಕ್ರಿಕೆಟಿಗ ಅಂದರೆ ಅದು ವಿರಾಟ್ ಕೊಹ್ಲಿ (Virat Kohli). ರಿಕಿ ಪಾಂಟಿಂಗ್ರೊಂದಿಗೆ ಸಚಿನ್ ತಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ವಿರುದ್ಧ ಆಡುವುದು ನನ್ನ ಜೀವನದ ವಿಶೇಷತೆಗಳಲ್ಲಿ ಒಂದಾಗಿದೆ. ನನ್ನ ಜೇಬಿನಲ್ಲಿ ಕೊನೆಯದಾಗಿ ಏನಾದರೂ ದುಡ್ಡು ಉಳಿದಿದ್ದರೆ ಬ್ರಿಯಾನ್ ಲಾರಾ ಅವರ ಬ್ಯಾಟಿಂಗ್ ವೀಕ್ಷಿಸಲು ನಾನು ಪಾವತಿಸುತ್ತೇನೆ. ಅದರ ಜತೆಗೆ ವಿರಾಟ್ ಕೊಹ್ಲಿ ನನಗಾಗಿ ಬ್ಯಾಟಿಂಗ್ ಮಾಡುವುದನ್ನು ನೋಡಲು ಬಯಸುತ್ತೇನೆ.
ವಿರಾಟ್ ಕೊಹ್ಲಿ ಬಗ್ಗೆ ನಾನು ಈ ರೀತಿ ಮಾತನಾಡಲು ಕಾರಣವೇನೆಂದರೆ ಆತ ಚೆಂಡನ್ನು ವೀಕ್ಷಿಸುವ ರೀತಿ, ವಿಕೆಟ್ಗಳ ನಡುವೆ ಓಡುವುದು, ಫಿಟ್ನೆಸ್, ಗ್ಲಾಡಿಯೇಟರ್ ಶೈಲಿ ನನಗೆ ತುಂವಾ ಇಷ್ಟವಾಗುತ್ತದೆ. ಈ ವಿಚಾರಕ್ಕೆ ಬರುವುದಾದರೆ ಆತನ ರೆಕಾರ್ಡ್ಗಳೇ ಮಾತನಾಡುತ್ತವೆ. ನೀವು ಎಂದಿಗೂ ಡೇಟಾದೊಂದಿಗೆ ವಾದಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ವಿರಾಟ್ ಸಚಿನ್ಗಿಂತಲೂ ಅತ್ಯುತ್ತಮ ಆಟಗಾರ ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಐಪಿಎಲ್ನಲ್ಲಿ ಲಖನೌ ಸೂಪರ್ಜೈಂಟ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.