

ಶಿಮ್ಲಾ: ದೇಶದಲ್ಲಿ ದಿನ ಕಳೆದಂತೆ ಶೀತದ ಅಬ್ಬರ ಜೋರಾಗುತ್ತಿದ್ದು, ಉತ್ತರ ಭಾರತದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಜಮ್ಮು-ಕಾಶ್ಮೀರ, ಹಿಮಾಚಲಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಜನಜೀವನವನ್ನು ಅಸ್ತವ್ಯಸ್ತವಾಗಿದೆ. ಭಾರೀ ಹಿಮದಿಂದಾಗಿ ರಸ್ತೆಯೆಲ್ಲಾ ತುಂಬಿಕೊಂಡಿದ್ದು, ಸಂಚಾರಕ್ಕೆ ಕಷ್ಟವಾಗುತ್ತಿದೆ. ಇನ್ನೂ ಕೆಲವೆಡೆ ವಾಹನಗಳು ಸ್ಕಿಡ್ ಆಗುತ್ತಿದ್ದು, ಪ್ರಯಾಣಿಸುವುದು ಕೂಡ ಕಷ್ಟಕರವಾಗಿದೆ.
ಇದೀಗ ಹಿಮಾವೃತ ರಸ್ತೆಯಿಂದ ಪಿಕ್ಅಪ್ ಟ್ರಕ್ವೊಂದು (Truck) ಜಾರಿ ಪ್ರಪಾತಕ್ಕೆ ಬಿದ್ದಿರುವ ಘಟನೆ ಹಿಮಾಚಲಪ್ರದೇಶದ ಮನಾಲಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಹಿಮಾವೃತ ರಸ್ತೆಗಳಲ್ಲಿ ಪ್ರಯಾಣಿಸುವಾಹ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರಿಗೆ ಸೂಚನೆಯನ್ನು ನೀಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಹಿಮಾವೃತ ರಸ್ತೆಯ ಅಪ್ ಹತ್ತುವಾಗ ಪಿಕ್ಅಪ್ ವಾಹನವೊಂದು ಬ್ರೇಕ್ಫೇಲ್ ಆಗಿ ನಿಯಂತ್ರಣ ಕಳೆದುಕೊಂಡಿದ್ದು, ಎಚ್ಚೆತ್ತ ಚಾಲಕ ತಕ್ಷಣವೇ ವಾಹನದಿಂದ ಜಿಗಿದಿದ್ದಾನೆ. ಆತ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರು ಕೂಡ ಅಷ್ಟರಲ್ಲಾಗಲೇ ಪಿಕ್ಅಪ್ ವಾಹನ ಕಣಿವೆಗೆ ಬೀಳುತ್ತಿರುವುದನ್ನ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಹಿಮಪಾತದಿಂದಾಗಿ, ಸುಮಾರು 1,000 ಪ್ರವಾಸಿಗರು ಮತ್ತು ಇತರ ವಾಹನಗಳು ಸೋಲಾಂಗ್ ನಾಲಾದಲ್ಲಿ ಸಿಲುಕಿಕೊಂಡಿವೆ. ಈ ವಾಹನಗಳಲ್ಲಿ ಸುಮಾರು 5,000 ಪ್ರವಾಸಿಗರು ಇದ್ದರು. ವಾಹನಗಳು ಮತ್ತು ಪ್ರವಾಸಿಗರನ್ನು ಕುಲು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.