

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ
ಪುತ್ತೂರು ಬಿಲ್ಲವ ಸಂಘದ ಆಶ್ರಯದಲ್ಲಿ ಇಚ್ಲಂಪಾಡಿ ಬಿಲ್ಲವ ಸಂಘ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾನವೀಯತೆಯ ತಾತ್ವಿಕ ನೆಲೆಗಟ್ಟಿನಲ್ಲಿ, ಏಕತೆ, ಶಾಂತಿ, ಸೌಹಾರ್ದದ ಆಧ್ಯಾತ್ಮಿಕ ತತ್ವವನ್ನು ಪಾಲಿಸುತ್ತಿದೆ. ನಾರಾಯಣಗುರುಗಳ ತತ್ವದಲ್ಲಿ ನಿರ್ಮಾಣವಾದ ಬಿಲ್ಲವ ಸಮಾಜ ಕೋಟಿ ಚೆನ್ನಯರ ಆದರ್ಶಗಳೊಂದಿಗೆ ಬಲಾಢ್ಯವಾಗಬೇಕಾಗಿದೆ ಎಂದು ಇಚ್ಲಂಪಾಡಿ ಬಿಲ್ಲವ ಸಮಿತಿ ಗೌರವಾಧ್ಯಕ್ಷ ಇಂದ್ರ ಪೂಜಾರಿ ಹೇಳಿದರು.
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬಿಲ್ಲವ ಸಂಘದಲ್ಲಿ ಆಯೋಜಿಸಲಾಗಿದ್ದ ಬಿಲ್ಲವ ಗ್ರಾಮ ಸಮಿತಿ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಬಿಲ್ಲವ ಸಮಿತಿ ಕೋಶಾಧಿಕಾರಿ ಮಹೇಶ್ ಚಂದ್ರ ಮಾತನಾಡಿದರು. ಇಚ್ಲಂಪಾಡಿ ಬಿಲ್ಲವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ನಿಡ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಜಾಣಪ್ಪ ಪೂಜಾರಿ ಶುಭಹಾರೈಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಿತ್, ಹರ್ಷಿತ್, ಸಹನಾ, ಯಶ್ವಿತಾ, ಮೌಲ್ಯ, ಕೀರ್ತನ್ ಅವರನ್ನು ಗೌರವಿಸಲಾಯಿತು. ಅಂಗನವಾಡಿಯಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಕೊಡೆ ವಿತರಿಸಲಾಯಿತು.
ವಿಜಯ ಮತ್ತು ಪ್ರಮೀಳಾ ಪ್ರಾರ್ಥಿಸಿದರು. ದೇವಿಪ್ರಸಾದ್ ಸ್ವಾಗತಿಸಿದರು. ಬಾಲಕೃಷ್ಣ ಕೋಟೆಗುಡ್ಡೆ ವರದಿ ವಾಚಿಸಿದರು. ವಿನೋದ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ವಿನೋದ್ ವಂದಿಸಿದರು. ಮೌಲ್ಯ ನಿರೂಪಿಸಿದರು.