2027ರ ಏಕದಿನ ವಿಶ್ವಕಪ್​ಗೆ ಸ್ಥಳ ನಿಗದಿ; ಮಹಾಸಮರಕ್ಕೆ ಆತಿಥ್ಯ ವಹಿಸಲಿದೆ ಈ ದೇಶಗಳು

World Cup
Published on

ನವದೆಹಲಿ: 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ​ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಮುಂಬರುವ ವಿಶ್ವಕಪ್​ಗೆ ಮೂರು ದೇಶಗಳು ಆತಿಥ್ಯ ವಹಿಸಲಿದೆ ಎಂದು ತಿಳಿದು ಬಂದಿದೆ.

ಅದರಂತೆ 2027ರ ಏಕದಿನ ವಿಶ್ವವಕಪ್​ಗೆ ಹರಿಣಗಳ ನಾಡು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಟೂರ್ನಿ ಆಯೋಜನೆಗೊಳ್ಳುತ್ತದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ (ICC) ತಿಳಿಸಿದೆ. ವಿಶ್ವಕಪ್​ ಪಂದ್ಯಾವಳಿಗಳನ್ನು ಅಕ್ಟೋಬರ್ ಹಾಗೂ ನವೆಂಬರ್​ ತಿಂಗಳಲ್ಲಿ ಆಯೋಜಿಸಲಾಗುತ್ತದೆ ಎಂದು ವರದಿಯಾಗಿದೆ.

ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಐಸಿಸಿ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, ಈ ಹಿಂದೆ 2003ರಲ್ಲಿ ಈ ಎರಡು ದೇಶಗಳು ಒಟ್ಟಾರೆಯಾಗಿ ವಿಶ್ವಸಮರಕ್ಕೆ ಆತಿಥ್ಯವಹಿಸಿದ್ದವು. ಆದರೆ, ಇದೇ ಮೊದಲ ಬಾರಿಗೆ ನಮೀಬಿಯಾಗೆ ಟೂರ್ನಿಯ ಆತಿಥ್ಯ ವಹಿಸುವ ಅವಕಾಶ ಸಿಕ್ಕಿರುವುದು ವಿಶೇಷವೆನ್ನಿಸಿದೆ.

2003ರ ನಂತರ ಮೊದಲ ಬಾರಿಗೆ 14 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ದಕ್ಷಿಣ ಆಫ್ರಿಕಾದ ಒಟ್ಟು 8 ಕ್ರೀಡಾಂಗಣಗಳಲ್ಲಿ 2027ರ ಏಕದಿನ ವಿಶ್ವಕಪ್ ಪಂದ್ಯಗಳು ನಡೆಯಲ್ಲಿವೆ. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್, ಪ್ರಿಟೋರಿಯಾದ ಸೆಂಚುರಿಯನ್ ಪಾರ್ಕ್, ಡರ್ಬನ್‌ನ ಕಿಂಗ್ಸ್‌ಮೀಡ್, ಗ್ಕೆಬರ್ಹಾದಲ್ಲಿನ ಸೇಂಟ್ ಜಾರ್ಜ್ ಪಾರ್ಕ್, ಪರ್ಲ್‌ನ ಬೋಲ್ಯಾಂಡ್ ಪಾರ್ಕ್ ಮತ್ತು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್, ಬ್ಲೋಮ್‌ಫಾಂಟೈನ್‌ನಲ್ಲಿರುವ ಮಂಗೌಂಗ್ ಓವಲ್ ಮತ್ತು ಪೂರ್ವ ಲಂಡನ್‌ನ ಬಫಲೋ ಪಾರ್ಕ್‌ನಲ್ಲಿ ಕೆಲವು ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net