ಟಿ-20 ವಿಶ್ವಕಪ್​; ಭಾರತ-ಪಾಕ್​ ಹೈವೋಲ್ಟೇಜ್​ ಕದನಕ್ಕೆ ಟೈಮ್​ ಫಿಕ್ಸ್​

T20 WorldCup
Published on

ನವದೆಹಲಿ: ಜೂನ್​ 1ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ತನ್ನ ಆಭಿಯಾನವನ್ನು ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಬಳಿಕ ಜೂನ್​ 09ರಂದು ಬದ್ಧವೈರಿ ಪಾಕಿಸ್ತಾನದ ವಿರುದ್ಧ ಆಡಲಿದೆ.

ಜೂನ್ 1 ರಿಂದ ಈ ಬಾರಿಯ ಚುಟುಕು ವಿಶ್ವಕಪ್ ಕದನ ಶುರುವಾಗಲಿದ್ದು, ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲಿಯೂ ಕೂಡ ಪಂದ್ಯ ಆರಂಭದ ಬಗ್ಗೆ ಸಮಯವನ್ನು ಪ್ರಸ್ತಾಪಿಸಲಾಗಿಲ್ಲ. ಇದೀಗ ಭಾರತ ತಂಡದ ಪಂದ್ಯಗಳ ಸಮಯ ಬಹಿರಂಗವಾಗಿದ್ದು, ಕ್ರೀಡಾಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ಧಾರೆ.

ಟೀಂ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಘಂಟೆ ಸುಮಾರಿಗೆ ಶುರು ಆಗಲಿದೆ. ಅಂದರೆ ಭಾರತದ ಪಂದ್ಯಗಳು ಯುಎಸ್​ಎನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಆರಂಭವಾಗಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನೇರ ಪ್ರಸಾರವಾಗಲಿದೆ. ಇಲ್ಲಿ ಭಾರತ ಮತ್ತು ಯುಎಸ್​ಎ ನಡುವೆ 10.30 ಗಂಟೆಗಳ ಸಮಯ ವ್ಯತ್ಯಾಸವಿದೆ.

Ind Vs Pak

ಟಿ20 ವಿಶ್ವಕಪ್​ನ ಹೈವೊಲ್ಟೆಜ್ ಫೈಟ್ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಜೂನ್ 9 ರಂದು ನಡೆಯಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯಕ್ಕೆ ನ್ಯೂಯಾರ್ಕ್​ನ ಹೊಸ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಈ ಪಂದ್ಯವು ಯುಎಸ್​ಎ ಕಾಲಮಾನ ಬೆಳಿಗ್ಗೆ 9.30 ರಿಂದ ಶುರುವಾಗಲಿದ್ದು, ಭಾರತದಲ್ಲಿ ರಾತ್ರಿ 8 ಗಂಟೆಯಿಂದ ನೇರ ಪ್ರಸಾರವಾಗಲಿದೆ.

ಅತ್ತ ಯುಎಸ್​ಎನಲ್ಲಿ ರಾತ್ರಿಯಾಗಿದ್ದರೆ, ಇತ್ತ ಭಾರತದಲ್ಲಿ ಬೆಳಿಗ್ಗೆಯಾಗಿರುತ್ತದೆ. ಹೀಗಾಗಿಯೇ ಭಾರತದ ಪಂದ್ಯಗಳನ್ನು ಯುಎಸ್​ಎನಲ್ಲಿ ಬೆಳಿಗ್ಗೆ ಆಯೋಜಿಸಲು ನಿರ್ಧರಿಸಲಾಗಿದೆ. ಇದರಿಂದ ವೀಕ್ಷಕರ ಕೊರತೆ ಉಂಟಾಗುವುದಿಲ್ಲ. ಹೀಗಾಗಿ ಭಾರತದ ಪಂದ್ಯಗಳಿಗೆ ಬೆಳಿಗ್ಗೆ ಸಮಯ ನಿಗದಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net