ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸ್ಥಾನ ಪಡೆದ ರೋಹಿತ್ ಶರ್ಮ

rohit rank web
Published on

ದುಬೈ: ಆರಂಭಿಕ ರೋಹಿತ್ ಶರ್ಮ, ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲಿ ಜೀವನಶ್ರೇಷ್ಠ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದರಿಂದ ಅವರು ಈಗ ಚೇತೇಶ್ವರ ಪೂಜಾರ ಅವರನ್ನು ಹಿಂದಿಕ್ಕಿ ಭಾರತದ 2ನೇ ಅತ್ಯುತ್ತಮ ಶ್ರೇಯಾಂಕಿತ ಟೆಸ್ಟ್ ಬ್ಯಾಟ್ಸ್‌ಮನ್ ಎನಿಸಿದ್ದಾರೆ. 5ನೇ ಸ್ಥಾನದಲ್ಲಿರುವ ನಾಯಕ ವಿರಾಟ್ ಕೊಹ್ಲಿ ಭಾರತದ ಅಗ್ರ ಬ್ಯಾಟ್ಸ್‌ಮನ್ ಆಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 66 ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 25 ರನ್ ಪೇರಿಸಿದ್ದ ರೋಹಿತ್ ಅವರ ರೇಟಿಂಗ್ ಪಾಯಿಂಟ್ ಈಗ 742ಕ್ಕೇರಿದ್ದು, 6 ಸ್ಥಾನ ಬಡ್ತಿ ಸಂಪಾದಿಸಿದ್ದಾರೆ. ಪಿಂಕ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ್ದ ಪೂಜಾರ 2 ಸ್ಥಾನ ಕುಸಿದು 10ನೇ ಸ್ಥಾನಕ್ಕಿಳಿದಿದ್ದಾರೆ. 2019ರ ಅಕ್ಟೋಬರ್‌ನಲ್ಲಿ 10ನೇ ಸ್ಥಾನಕ್ಕೇರಿದ್ದು, ರೋಹಿತ್‌ರ ಈ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ಕೂಡ ರ‌್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದಾರೆ. 11 ವಿಕೆಟ್ ಕಬಳಿಸಿದ್ದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್, 38ರಿಂದ 30ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಅಶ್ವಿನ್ 7ರಿಂದ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇನ್ನು ವಾರಕ್ಕೊಮ್ಮೆ ಅಪ್ಡೇಟ್

ಐಸಿಸಿ ಪುರುಷರ ಮತ್ತು ಮಹಿಳೆಯರ ರ‌್ಯಾಂಕಿಂಗ್ 2021ರ ಮಾರ್ಚ್‌ನಿಂದ ಪ್ರತಿ ವಾರಕ್ಕೊಮ್ಮೆ ಪರಿಷ್ಕೃತಗೊಳ್ಳಲಿದೆ ಎಂದು ಐಸಿಸಿ ತಿಳಿಸಿದೆ. ರ‌್ಯಾಂಕಿಂಗ್ ಲೆಕ್ಕಾಚಾರ ಬದಲಾಗುವುದಿಲ್ಲ. ಆದರೆ ಪ್ರತಿ ಏಕದಿನ-ಟಿ20 ಸರಣಿ ಅಥವಾ ಪ್ರತಿ ಟೆಸ್ಟ್ ಪಂದ್ಯಕ್ಕೊಮ್ಮೆ ಅಪ್ಡೇಟ್ ಆಗುವ ಬದಲಾಗಿ ಇನ್ನು ಪ್ರತಿ ವಾರಕ್ಕೊಮ್ಮೆ, ಆ ವೇಳೆ ನಡೆಯುತ್ತಿರುವ ಸರಣಿ, ಟೆಸ್ಟ್ ನಡುವೆಯೇ, ಆ ಸರಣಿ-ಟೆಸ್ಟ್ ನಿರ್ವಹಣೆಯನ್ನು ಪರಿಗಣಿಸದೆ ಪರಿಷ್ಕರಣೆಗೆ ಒಳಗಾಗಲಿದೆ ಎಂದು ಐಸಿಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net