

ನವದೆಹಲಿ: ಜೂನ್ 2ರಿಂದ ಅಮೆರಿಕ&ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲಿರುವ ಎಲ್ಲ 20 ದೇಶಗಳು 15 ಆಟಗಾರರ ಅಂತಿಮ ತಂಡವನ್ನು ಪ್ರಕಟಿಸಲು ಮೇ 1ರ ಗಡುವನ್ನು ಐಸಿಸಿ ನಿಗದಿಪಡಿಸಿದೆ. ಬಳಿಕ ಮೇ 25ರವರೆಗೆ ಈ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿರುತ್ತದೆ. ನಂತರದಲ್ಲಿ ಯಾವುದಾದರೂ ಬದಲಾವಣೆ ಮಾಡಬೇಕಾದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅಗತ್ಯವಾಗಿರುತ್ತದೆ.
ವಿಶ್ವಕಪ್ ತಂಡ ಅಂತಿಮಗೊಳಿಸಲು ಮೇ 1ರ ಗಡುವಿನಿಂದಾಗಿ ಭಾರತ ತಂಡದ ಆಯ್ಕೆಗೆ ಐಪಿಎಲ್ನಲ್ಲಿ ಮಾರ್ಚ್-ಏಪ್ರಿಲ್ನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಆಟಗಾರರು ತೋರುವ ನಿರ್ವಹಣೆಯೇ ನಿರ್ಣಾಯಕವಾಗಿರುತ್ತದೆ. ಆಯ್ಕೆಗಾರರ ಗಮನಸೆಳೆಯಲು ಐಪಿಎಲ್ನ ಮೊದಲಾರ್ಧದಲ್ಲೇ ಆಟಗಾರರು ಪ್ರಯತ್ನಿಸಬೇಕಾಗಿದೆ. ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮ ಭಾರತ ತಂಡವನ್ನು ಮುನ್ನಡೆಸುವುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕಳೆದ ತಿಂಗಳೇ ಖಚಿತಪಡಿಸಿದ್ದರು. ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದು, ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ಆಡಲಿದೆ.
ವಿಶ್ವಕಪ್ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಬಹುಮಾನ ಮೊತ್ತದ ವಿವರವನ್ನೂ ಐಸಿಸಿ ಶ್ರೀದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.