ನವದಹೆಲಿ: ವಿವಾದಗಳಲ್ಲಿ ಸಿಲುಕಿರುವ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮಹತ್ವದ ಕ್ರಮಕೈಗೊಂಡಿದ್ದು, ಆಕೆಯ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸಿದೆ. ಅಲ್ಲದೆ ಮುಂದಿನ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ನಿಷೇಧ ಹೇರಿದೆ. ಆಯೋಗದ ಸಂಪೂರ್ಣ ಪರಿಶೀಲನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯುಪಿಎಸ್‌ಸಿ ಈ ಹಿಂದೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಜುಲೈ 19ರಂದು ಪ್ರಕರಣ ದಾಖಲಿಸಿತ್ತು.
ಇದನ್ನು ಓದಿ: ಪ್ರಧಾನಿ ಮೋದಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ ಕಾಂಗ್ರೆಸ್; ಕಾರಣ ಹೀಗಿದೆ
ನಾಗರಿಕ ಸೇವಾ ಪರೀಕ್ಷೆ(ಸಿಎಸ್ಇ)-2022ಕ್ಕೆ ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಅಭ್ಯರ್ಥಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ದುಷ್ಕೃತ್ಯದ ಬಗ್ಗೆ ವಿವರವಾದ ಮತ್ತು ಸಂಪೂರ್ಣ ತನಿಖೆ ನಡೆಸಲಾಗಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಪೂಜಾ ಖೇಡ್ಕರ್ ಅವರು CSE-2022 ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ ಎಂದು ಆಯೋಗ ತಿಳಿಸಿದೆ.
ಪೂಜಾ ಖೇಡ್ಕರ್ ಪ್ರಕರಣದ ತನಿಖೆಗಾಗಿ ಆಯೋಗವು 15 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಒಳಗೊಂಡಿರುವ ಸಿಎಸ್ಇಯ ಕಳೆದ 15 ವರ್ಷಗಳ ಡೇಟಾವನ್ನು ಪರಿಶೀಲಿಸಿದೆ. ಇದಾದ ನಂತರ ಖೇಡ್ಕರ್ ಅವರು ಎಷ್ಟು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಏಕೆಂದರೆ ಅವರು ಪ್ರತಿ ಬಾರಿಯೂ ತಮ್ಮ ಹೆಸರನ್ನು ಮಾತ್ರವಲ್ಲದೆ ಅವರ ಪಾಲಕರ ಹೆಸರನ್ನು ಸಹ ಬದಲಾಯಿಸಿದ್ದಾರೆ.
ತನ್ನ ಹೆಸರು, ತಂದೆ ಮತ್ತು ತಾಯಿಯ ಹೆಸರು, ಅವರ ಭಾವಚಿತ್ರ/ಸಹಿ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಅವರ ಗುರುತನ್ನು ಬದಲಾಯಿಸುವ ಮೂಲಕ ಪರೀಕ್ಷಾ ನಿಯಮಗಳ ಅಡಿಯಲ್ಲಿ ಅನುಮತಿಸುವ ಮಿತಿಗಿಂತ ಹೆಚ್ಚಿನ ಪ್ರಯತ್ನಗಳನ್ನು ಮೋಸದಿಂದ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಆಯೋಗ ಹೇಳಿದೆ. ಆಕೆಯ ದೈಹಿಕ ಅಂಗವೈಕಲ್ಯವನ್ನು ಸಾಬೀತುಪಡಿಸಲು ಅವರು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂಬ ವರದಿಗಳ ನಂತರ ಪಿಎಸ್‌ಸಿ ಆಕೆಗೆ ಶೋಕಾಸ್ ನೋಟಿಸ್ ನೀಡಿತ್ತು.(ಏಜೆನ್ಸೀಸ್)
ದೆಹಲಿ ಕೋಚಿಂಗ್ ಸೆಂಟರ್ ದುರ್ಘಟನೆ; ಎಂಸಿಡಿಗೆ ಛೀಮಾರಿ ಹಾಕಿ, ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್