ಬಿಎಂಎಸ್‌ಇಟಿ ಆಡಳಿತ ಮಂಡಳಿ ಟ್ರಸ್ಟಿಯಾಗಿ ರಶ್ಮಿ ಮಹೇಶ್ ನೇಮಕ

26102021 Koppal Rashmi Mahesh
Published on

ಬೆಂಗಳೂರು ಬಸವನಗುಡಿಯಲ್ಲಿರುವ ಬಿ.ಎಂ. ಶ್ರೀನಿವಾಸಯ್ಯ ಎಜುಕೇಷನಲ್ ಟ್ರಸ್ಟ್ (ಬಿಎಂಎಸ್‌ಇಟಿ) ಆಡಳಿತ ಮಂಡಳಿ ಟ್ರಸ್ಟಿಯಾಗಿ ಹಿರಿಯ ಐಎಎಸ್ ಅಧಿಕಾರಿ ವಿ. ರಶ್ಮಿ ಮಹೇಶ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಶ್ಮಿ ಮಹೇಶ್ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರ ಅವಧಿಯು ಮುಂದಿನ 4 ವರ್ಷ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಯನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಆದರೆ, ಈ ವರೆಗೆ ಯಾವುದೇ ಸಮಿತಿ ರಚನೆ ಮಾಡಿರಲಿಲ್ಲ. ಈಗ ಸರ್ಕಾರದ ಪ್ರತಿನಿಧಿಯಾಗಿ ಆಡಳಿತ ಮಂಡಳಿ ಟ್ರಸ್ಟಿಯನ್ನು ನೇಮಕ ಮಾಡಿದೆ.

ಬಿಜೆಪಿ ಸರ್ಕಾರದ ವಿರುದ್ಧ ಎಚ್ಡಿಕೆ ಆರೋಪ:

ಸಾರ್ವಜನಿಕ ಟ್ರಸ್ಟ್ ಆಗಿರುವ ಬಿಎಂಎಸ್ ಕಾಲೇಜನ್ನು ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ವ್ಯಕ್ತಿಯೊಬ್ಬರ ಹೆಸರಿಗೆ ನೋಂದಣಿ ಮಾಡಿಕೊಡಲು ಸರ್ಕಾರ ಮುಂದಾಗಿದೆ. ಈ ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಭಾಗಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದ್ದರು.

ಈ ಆರೋಪವು ಸದನದಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕುಮಾರಸ್ವಾಮಿ ಪರ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಕೂಡ ದನಿಗೂಡಿಸಿದ್ದರು. ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net