ಅಗತ್ಯವಾದರೆ ಜನರಿಗಾಗಿ ನಾನು ಬೇಡಲೂ ಸಿದ್ಧ; ಮುಖ್ಯಮಂತ್ರಿ ಕೇಜ್ರಿವಾಲ್ ಹೀಗಂದಿದ್ಯಾಕೆ?

Aravind Kejriwal
Published on

ದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ಭಿಕ್ಷೆ ಬೇಡಲು ಕೂಡ ಸಜ್ಜಾಗಿದ್ದಾರೆ. ಹಾಗಂತ ಇದು ಗಾಸಿಪ್​ ಅಲ್ಲ, ನಾನು ಬೇಡಲೂ ಸಿದ್ಧ ಎಂಬುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರನ್ನು ಹೀಗೆ ಬೇಡುವ ಮಾತನಾಡುವ ಸ್ಥಿತಿಗೆ ತಂದಿರುವುದು ಕರೊನಾ.

ಹೌದು.. ಕರೊನಾದಿಂದಾಗಿ ಕಂಗೆಟ್ಟಿರುವ ರಾಜ್ಯದ ಜನತೆಯ ಪರವಾಗಿ ನಾನು ಬೇಡಲು ಕೂಡ ಸಿದ್ಧ ಎಂದು ಸಿಎಂ ಕೇಜ್ರಿವಾಲ್ ಹೇಳಿಕೊಂಡಿರುವುದು ಲಸಿಕೆಯ ವಿಷಯದಲ್ಲಿ. ಲಸಿಕೆ ವಿತರಣೆ ಸಂಬಂಧ ಕೇಂದ್ರ ಸರ್ಕಾರ ವಿಧಿಸಿರುವ ಕೆಲವು ನಿರ್ಬಂಧಗಳನ್ನು ಅದು ತೆರವುಗೊಳಿಸಬೇಕು. ರಾಜ್ಯಗಳಲ್ಲಿ ಹೆಚ್ಚಿನ ಲಸಿಕೆ ಕೇಂದ್ರಗಳನ್ನು ತೆರೆಯಲು ಹಾಗೂ ಎಲ್ಲ ವಯಸ್ಸಿನವರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು ಎಂಬುದಾಗಿ ಕೇಜ್ರಿವಾಲ್ ಕೇಳಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟರೆ ಜನರ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡಲು ದೆಹಲಿ ಸರ್ಕಾರ ಸಿದ್ಧವಿದೆ. ಮಾತ್ರವಲ್ಲ ದೆಹಲಿಯ ಎಲ್ಲರಿಗೂ ಮೂರೇ ತಿಂಗಳಲ್ಲಿ ಲಸಿಕೆ ನೀಡುವುದನ್ನು ಪೂರ್ಣಗೊಳಿಸಬಲ್ಲೆವು ಎಂದಿರುವ ಕೇಜ್ರಿವಾಲ್​, ಅಗತ್ಯಬಿದ್ದರೆ ನನ್ನ ರಾಜ್ಯದ ಜನರಿಗಾಗಿ ಅವರಿಗೆ ನೀಡಬೇಕಾದ ಲಸಿಕೆಗಾಗಿ ನಾನು ಬೇಡಿಕೊಳ್ಳಲೂ ಸಿದ್ಧ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net