ಏನೇ ಆಗಲಿ ನಾನು ಅತ್ತು ಬಿಡುತ್ತೇನೆ... ಫೈನಲ್​ ಪಂದ್ಯಕ್ಕೂ ಮುನ್ನವೇ ನಾಯಕಿ ಹರ್ಮನ್​ಪ್ರೀತ್ ಭಾವುಕ! ICC Womens World Cup 2025

ICC Womens World Cup 2025
Published on

ಮುಂಬೈ: ಭಾರತೀಯರ ಪಾಲಿಗೆ ಇಂದು ಮಹತ್ವದ ದಿನ. ಏಕೆಂದರೆ, ಇಂದು ನಡೆಯಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ ಫೈನಲ್ ( ICC Womens World Cup 2025 ) ​ನಲ್ಲಿ ಭಾರತದ ಮಹಿಳಾ ತಂಡ ಟ್ರೋಫಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಟೀಮ್​ ಇಂಡಿಯಾ ಈಗಾಗಲೇ ಎರಡು ಬಾರಿ ವಿಶ್ವಕಪ್‌ನ ಫೈನಲ್ ತಲುಪಿದೆ. 2005 ಮತ್ತು 2017ರ ಆವೃತ್ತಿಗಳಲ್ಲಿ ಪ್ರಶಸ್ತಿ ಹೋರಾಟಕ್ಕೆ ಅರ್ಹತೆ ಪಡೆದರು ಕೂಡ ರನ್ನರ್ ಅಪ್ ಆಗಿ ತಮ್ಮ ಹೋರಾಟವನ್ನು ಮುಗಿಸಿತು. ಈ ಬಾರಿ, ತವರು ನೆಲದಲ್ಲಿ ಮೂರನೇ ಬಾರಿಗೆ ಫೈನಲ್ ತಲುಪಿರುವ ಭಾರತ ತಂಡ, ಚೊಚ್ಚಲ ಬಾರಿ ಟ್ರೋಫಿಗೆ ಮುತ್ತಿಕ್ಕಲು ಎದುರು ನೋಡುತ್ತಿದೆ.

ಭಾನುವಾರ ನವಿ ಮುಂಬೈನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್​ ಪಡೆ, ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗುವ ಭರವಸೆಯಲ್ಲಿದೆ. ಭಾರತ ಈಗಾಗಲೇ ಎರಡು ಬಾರಿ ಫೈನಲ್‌ನಲ್ಲಿ ಆಡಿದ್ದರೂ, ದಕ್ಷಿಣ ಆಫ್ರಿಕಾ ಪ್ರಶಸ್ತಿ ಹೋರಾಟಕ್ಕೆ ಅರ್ಹತೆ ಪಡೆದಿರುವುದು ಇದೇ ಮೊದಲು.

ಇದೇ ಸಂದರ್ಭದಲ್ಲಿ, ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಫೈನಲ್ ಪಂದ್ಯಕ್ಕೂ ಮುನ್ನ ಆಡಿರುವ ಮಾತುಗಳು ವೈರಲ್ ಆಗಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕಪ್ ಫೈನಲ್‌ನಲ್ಲಿ ಸೋತಾಗ ಹೇಗನಿಸುತ್ತದೆ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಈ ಬಾರಿ ನಾವು ಆ ಭಾವನೆಯನ್ನು ಸಂತೋಷದ ಭಾವನೆಯನ್ನಾಗಿ ಪರಿವರ್ತಿಸಲು ಬಯಸಿದ್ದೇವೆ. ಪ್ರಶಸ್ತಿಯನ್ನು ಗೆದ್ದು ನಮ್ಮ ಶಕ್ತಿಯನ್ನು ಪ್ರದರ್ಶಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಇದು ನಮಗೆ ಬಹಳ ವಿಶೇಷವಾದ ದಿನ. ನಾವು ಈ ಹಂತಕ್ಕೆ ಬರಲು ಕಠಿಣ ಪರಿಶ್ರಮ ವಹಿಸಿದ್ದೇವೆ ಮತ್ತು ಕಠಿಣ ಸವಾಲುಗಳನ್ನು ಜಯಿಸಿದ್ದೇವೆ. ಇಂತಹ ನಿರ್ಣಾಯಕ ಸಮಯದಲ್ಲಿ ಒತ್ತಡ ನಮ್ಮ ಮೇಲೆ ಬರದಂತೆ ಆಡುವುದು ಅತ್ಯಂತ ಮುಖ್ಯವಾದ ವಿಷಯ ಎಂದರು.

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮಾಚರಣೆಗಳು ಮೊಳಗಿದವು. ಆಟಗಾರರು ಹಾಗೂ ಅಭಿಮಾನಿಗಳು ಸಹ ತುಂಬಾ ಭಾವುಕರಾಗಿದ್ದರು. ಈ ವಿಚಾರವಾಗಿ ಹರ್ಮನ್‌ಪ್ರೀತ್ ಪ್ರತಿಕ್ರಿಯಿಸಿದ್ದು, ಆ ಕ್ಷಣದಲ್ಲಿ ನನ್ನ ಭಾವನೆಗಳನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ತುಂಬಾ ಭಾವುಕಳಾಗಿ ಅಳುತ್ತಿದ್ದೆ. ಎಷ್ಟು ಹೊತ್ತು ಅತ್ತೆ ಎಂಬುದು ನನಗೆ ನೆನಪಿಲ್ಲ. ಸೋತ ನಂತರ ಅಲ್ಲ, ಗೆದ್ದ ನಂತರವೂ ನಾನು ಅಳುತ್ತೇನೆ ಎಂದರು.

ನಾನು ಅಳುವುದನ್ನು ನೀವೆಲ್ಲರೂ ಟಿವಿಯಲ್ಲಿ ನೋಡಿರಬೇಕು. ಆದರೆ, ನಮಗೆ ಅದು ಅಭ್ಯಾಸವಾಗಿದೆ. ನಾನು ಡ್ರೆಸ್ಸಿಂಗ್ ಕೋಣೆಯಲ್ಲಿ ಅಳುವುದನ್ನು ಹಲವು ಬಾರಿ ನೋಡಿದ್ದಾರೆ. ಸಣ್ಣ ವಿಷಯಗಳಿಗೂ ನಾನು ಭಾವುಕಳಾಗುತ್ತೇನೆ. ವಿಶೇಷವಾಗಿ ತಂಡವು ಬಯಸಿದ ಫಲಿತಾಂಶವನ್ನು ಪಡೆದಾಗ, ಬೇರೆಯವರಿಗಿಂತ ಮೊದಲು ನನ್ನ ಕಣ್ಣಲ್ಲಿ ನೀರು ಬರುತ್ತದೆ ಎಂದು ಹರ್ಮನ್​ಪ್ರೀತ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net