

ಮುಂಬೈ: ಅಶುತೋಷ್ ಗೋವಾರಿಕರ್ ನಿರ್ದೇಶನದ ಅಮೀರ್ ಖಾನ್ ಅಭಿನಯದ ಬ್ಲಾಕ್ಬಸ್ಟರ್ ಹಿಂದಿ ಭಾಷೆಯ 'ಲಗಾನ್' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಬಂದ ಅತ್ಯುತ್ತಮ ಕ್ರೀಡಾ ನಾಟಕಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಲನಚಿತ್ರ. ಈ ಚಿತ್ರ ಕೇವಲ ಗಳಿಕೆ ಮಾತ್ರವಲ್ಲದೇ, ಸಿನಿಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿತು.
'ಗದರ್'ನಂತಹ ಮಾಸ್ ಚಿತ್ರದೊಂದಿಗೆ ಇದ್ದ ಪೈಫೋಟಿ ಹೊರತಾಗಿಯೂ, 'ಲಗಾನ್' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕೊಟ್ಟು, ಕಲ್ಟ್ ಕ್ಲಾಸಿಕ್ ಚಿತ್ರವಾಗಿ ಹೊರಹೊಮ್ಮಿತು. ಈ ಚಿತ್ರದಲ್ಲಿ ನಾಯಕಿಯಾಗಿ ಗ್ರೇಸಿ ಸಿಂಗ್ ಬದಲಿಗೆ ತಾವು ನಟಿಸಬೇಕಿತ್ತು ಎಂದು ಬಾಲಿವುಡ್ನ ಖ್ಯಾತ ನಟಿಯೊಬ್ಬರು ಹೇಳಿಕೊಂಡಿರುವುದು ಇದೀಗ ಮುನ್ನೆಲೆಗೆ ಬಂದಿದೆ.
ಅಸಲಿಗೆ 'ಲಗಾನ್' ಸಿನಿಮಾದಲ್ಲಿ ಅಮೀರ್ ಖಾನ್ಗೆ ನಾಯಕಿಯಾಗಿ ರಾಣಿ ಮುಖರ್ಜಿ ನಟಿಸಬೇಕಿತ್ತಂತೆ! ಈ ಕುರಿತು ಸ್ವತಃ ರಾಣಿ ಅವರೇ ಇದೀಗ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಗೋವಾದಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ರಾಣಿ ಮುಖರ್ಜಿ, "ಚಿತ್ರದ ಭಾಗವಾಗದಿರುವುದು ನಿಜಕ್ಕೂ ದುರದೃಷ್ಟಕರ. ಲಗಾನ್ ಚಿತ್ರದಲ್ಲಿ ಅಭಿನಯಿಸಲು ನನಗೆ ಅವಕಾಶ ಸಿಕ್ಕಿತ್ತು. ಆದ್ರೆ, ಅಂದಿನ ನನ್ನ ಪರಿಸ್ಥಿತಿ ಅದನ್ನು ಕಳೆದುಕೊಳ್ಳುವಂತೆ ಮಾಡಿತು" ಎಂದರು.
"ಲಗಾನ್ ಕಳೆದುಕೊಳ್ಳಲು ಪ್ರಮುಖ ಕಾರಣ ನಿರ್ದಿಷ್ಟ ವೇಳಾಪಟ್ಟಿಗಳು. ಅಮೀರ್ ಆ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡವಾಗ, ರಾಣಿ ನಾನು ಈ ಚಿತ್ರವನ್ನು ಒಂದು ತಾಣದಲ್ಲಿ ಆರು ತಿಂಗಳ ಕಾಲ ಶೂಟ್ ಮಾಡುತ್ತಿದ್ದೇನೆ. ಹಾಗಾಗಿ ನನ್ನ ಎಲ್ಲಾ ನಟರು ನಿರ್ದಿಷ್ಟವಾಗಿ ಈ ಸ್ಥಳದಲ್ಲಿ 6 ತಿಂಗಳುಗಳ ಕಾಲ ಇರಬೇಕು, ಅರ್ಧದಲ್ಲಿ ಹೋಗುವಂತಿಲ್ಲ ಎಂದು ಹೇಳಿದ್ದರು. ನಾನು ಆಗಲೇ ಸುಮಾರು 20 ದಿನಗಳ ಚಿತ್ರಕ್ಕೆ ಸಹಿ ಹಾಕಿದ್ದೆ, ಹಾಗಾಗಿ ಆಮೀರ್ ಅವರೊಂದಿಗೆ ಲಗಾನ್ನಲ್ಲಿ ಅಭಿನಯಿಸುವ ಅವಕಾಶವನ್ನು ಕಳೆದುಕೊಂಡೆ" ಎಂದು ಬೇಸರ ವ್ಯಕ್ತಪಡಿಸಿದರು,(ಏಜೆನ್ಸೀಸ್).