ಈ ವಿಷಯದಲ್ಲಿ ಪಾಪ ಹಾರ್ದಿಕ್ ಪಾಂಡ್ಯ​ ಅನ್​ಲಕ್ಕಿ: MI​ ಕ್ಯಾಪ್ಟನ್ ಬಗ್ಗೆ 'ಬಜ್ಜಿ' ಮನದಾಳ

hardik pandya
Published on

ನವದೆಹಲಿ: ಪ್ರಸ್ತುತ ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ಸ್ಥಾನವನ್ನು ವಹಿಸಿಕೊಂಡಿರುವ ಸೂರ್ಯಕುಮಾರ್​ ಯಾದವ್​, ತಂಡವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗುವ ವಿಶ್ವಾಸ ನೀಡಿದ್ದಾರೆ. ಒಬ್ಬ ನಾಯಕನಾಗಿ ಹಾಗೂ ತಂಡದ ಉತ್ತಮ ಬ್ಯಾಟರ್​ ಆಗಿ ಕಣಕ್ಕಿಳಿಯುವ ಸೂರ್ಯ, ಟಿ20 ಕ್ಯಾಪ್ಟನ್ಸಿಗೆ (T20 Captain) ಹೇಳಿ ಮಾಡಿಸಿದ ಆಟಗಾರ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಈ ಹಿಂದೆ ಟಿ20 ನಾಯಕನಾಗಿ ಟೀಮ್​ನ ಮುನ್ನಡೆಸಿದ್ದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು (Hardik Pandya) ಕ್ಯಾಪ್ಟನ್ಸಿ ಸ್ಥಾನದಿಂದ ಕೆಳಗಿಳಿಸಿ, ಆ ಜಾಗಕ್ಕೆ ಸೂರ್ಯಕುಮಾರ್​ ಅನ್ನು ನೇಮಕ ಮಾಡಲಾಯಿತು. ಇದು ಕೆಲವರಲ್ಲಿ ಗೊಂದಲ ಮೂಡಿಸಿದ್ದೇ ಆದರೂ ಅಂತಿಮವಾಗಿ ಒಪ್ಪಿಕೊಂಡರು. ಪ್ರಸ್ತುತ ಭಾರತೀಯ ಕ್ರಿಕೆಟ್​ನಲ್ಲಿ ಐಪಿಎಲ್​ನದ್ದೇ ಸದ್ದು-ಗದ್ದಲ ನಡೆಯುತ್ತಿರುವಾಗ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಮಾತ್ರ ಪಾಂಡ್ಯ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.

ಹಾರ್ದಿಕ್​ ಬದಲಿಗೆ ಸೂರ್ಯಕುಮಾರ್​ ಏಕೆ?

ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ರೋಹಿತ್ ಶರ್ಮ ಕ್ಯಾಪ್ಟನ್​ ಆಗಿದ್ದರೆ, ಹಾರ್ದಿಕ್ ಉಪನಾಯಕನ ಸ್ಥಾನ ವಹಿಸಿಕೊಂಡಿದ್ದರು. 17 ವರ್ಷಗಳ ಬಳಿಕ ಟಿ20 ಟ್ರೋಫಿ ಗೆದ್ದುಕೊಟ್ಟ ಬೆನ್ನಲ್ಲೇ ರೋಹಿತ್ ಟಿ20 ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದರು. ಶರ್ಮ ನಿರ್ಗಮನದ ಹಿನ್ನಲೆ ಡೆಪ್ಯೂಟಿ ಕ್ಯಾಪ್ಟನ್​ ಸ್ಥಾನದಲ್ಲಿದ್ದ ಪಾಂಡ್ಯರನ್ನು ಟೀಮ್ ಇಂಡಿಯಾದ ನೂತನ ಟಿ20 ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆದ್ರೆ, ಗೌತಮ್ ಗಂಭೀರ್​ ತಂಡದ ನೂತನ ಹೆಡ್ ಕೋಚ್ ಆಗ್ತಿದ್ದಂತೆ ಒಂದಷ್ಟು ಕಾರಣಗಳಿಂದ ಹಾರ್ದಿಕ್​ರನ್ನು ಕ್ಯಾಪ್ಟನ್​ ಹುದ್ದೆಯಿಂದ ಕೆಳಗಿಳಸಲಾಯಿತು. ಸದ್ಯ ಈ ವಿಷಯವನ್ನು ಪ್ರಸ್ತಾಪಿಸಿರುವ ಹರ್ಭಜನ್​, ಭಾರತಕ್ಕೆ ಟಿ20 ನಾಯಕನಾಗಿ ಪಾಂಡ್ಯ ಇದ್ದರೆ ಸೂಕ್ತ ಎಂದಿದ್ದಾರೆ.

ಹಾರ್ದಿಕ್​ ಅನ್​ಲಕ್ಕಿ

"ಹಾರ್ದಿಕ್​ ಅಂತಹದ್ದೇನು ತಪ್ಪು ಮಾಡಿದರು ಎಂಬುದು ನನಗೆ ಗೊತ್ತಿಲ್ಲ. ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿ ಆತನಿಗೆ ಮುಂಬರುವ ಸರಣಿ ಮತ್ತು ಆಯಾ ಫಾರ್ಮೆಟ್​ನಲ್ಲಿ ಪಾಂಡ್ಯ ಉಪಸ್ಥಿತಿ ಹೇಗಿರಬೇಕು ಎಂಬುದನ್ನು ಸರಿಯಾಗಿ ವಿವರಿಸಬಹುದಿತ್ತು. ರೋಹಿತ್ ಅನುಪಸ್ಥಿತಿಯಲ್ಲಿ ನಾಯಕನ ಜವಾಬ್ದಾರಿ ಹೊತ್ತಿದ್ದ ಹಾರ್ದಿಕ್​ರನ್ನು ಇಂಜುರಿ ನೆಪದಲ್ಲಿ ಹೊರಹಾಕಿದ್ದು ಸರಿಯಲ್ಲ. ಕ್ಯಾಪ್ಟನ್ ಸ್ಥಾನಕ್ಕೆ ಪಾಂಡ್ಯ ಅರ್ಹ. ಟಿ20 ನಾಯಕನಾಗಿ ಸೂರ್ಯಕುಮಾರ್​ ಯಾದವ್​ರನ್ನು ಆಯ್ಕೆ ಮಾಡಿದ್ದರಲ್ಲಿ ನನಗೇನು ಬೇಸರ ಅಥವಾ ಆಕ್ಷೇಪಣೆ ಇಲ್ಲ. ಆದ್ರೆ, ಫಿಟ್ನೆಸ್​ ವಿಷಯವನ್ನು ಮುಂದಿಟ್ಟು, ಪಾಂಡ್ಯರನ್ನು ಕೆಳಗಿಳಿಸಿದ್ದು ಏಕೆ? ಅನಿಸಿತು. 'ಸ್ಕೈ'ಗೆ ಕ್ಯಾಪ್ಟನ್ಸಿ ಅವಶ್ಯಕತೆ ಇರಲಿಲ್ಲ. ಆದರೆ, ಹಾರ್ದಿಕಗೆ ಅವಶ್ಯವಿತ್ತು. ಈ ವಿಷಯದಲ್ಲಿ ಹಾರ್ದಿಕ್ ಪಾಂಡ್ಯ ಮಾತ್ರ ಅನ್​ಲಕ್ಕಿ" ಎಂದು ಬಜ್ಜಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net