Nithya Menen : ನಟಿ ನಿತ್ಯಾ ಮೆನನ್ ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ನಿತ್ಯಾ, ಕನ್ನಡಿಗರಿಗೂ ಅಚ್ಚುಮೆಚ್ಚು.

ನಿತ್ಯಾ ಮೆನನ್ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ವಿಶಿಷ್ಟವಾದ ಗುರುತನ್ನು ಮೂಡಿಸಿದ್ದಾರೆ. ಹೀರೋ ಯಾರೇ ಆಗಿರಲಿ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನಿತ್ಯಾ ಮೆನನ್ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೆ, ನಿತ್ಯಾ ನಟಿಸಿದ ಅನೇಕ ಸಿನಿಮಾಗಳಲ್ಲಿ ಅವರ ಪಾತ್ರವೇ ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದಿದೆ.
ಸಿನಿಮಾ ಉದ್ಯಮ ನಿತ್ಯಾ ಅವರಿಗೆ ಹೆಸರು, ಖ್ಯಾತಿ, ಆಸ್ತಿ ಮತ್ತು ಸ್ಥಾನಮಾನವನ್ನು ನೀಡಿದೆ. ಆದಾಗ್ಯೂ, ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಚಿತ್ರರಂಗದಲ್ಲಿರಲು ಇಷ್ಟಪಡುವುದಿಲ್ಲ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ರವಿ ಮೋಹನ್ (ಜಯಂ ರವಿ) ಅವರೊಂದಿಗೆ ನಟಿಸಿರುವ ಕಾದಲಿಕ್ಕ ನೆರಮಿಲೈ ಸಿನಿಮಾ ಕಳೆದ ಸಂಕ್ರಾಂತಿಯಂದು ಬಿಡುಗಡೆಯಾಯಿತು. ಸದ್ಯ ನಿತ್ಯಾ ಅವರು ಚಿತ್ರದ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ಸಿನಿಮಾರಂಗ ತನಗೆ ಇಷ್ಟವಿಲ್ಲದ ಕ್ಷೇತ್ರ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಈಗ ಯಾವುದೇ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೆ ಸಿನಿಮಾರಂಗ ಬಿಟ್ಟು ಹೋಗುವುದಾಗಿ ಹೇಳಿದ್ದಾರೆ. ಸೆಲೆಬ್ರಿಟಿಯಾಗಿರುವುದಕ್ಕಿಂತ ಸಾಮಾನ್ಯ ಜೀವನವನ್ನು ಅನುಭವಿಸಲು ಇಷ್ಟಪಡುತ್ತೇನೆ. ಅದೇ ರೀತಿ, ಬಹಳಷ್ಟು ಪ್ರಯಾಣ ಮಾಡಲು ಇಷ್ಟಪಡುತ್ತೇನೆ. ಈ ಕಾರಣಕ್ಕಾಗಿಯೇ ಬಾಲ್ಯದಲ್ಲಿ ಪೈಲಟ್ ಆಗಬೇಕೆಂದು ಬಯಸಿದ್ದೆ ಎಂದು ನಿತ್ಯಾ ನೆನಪಿಸಿಕೊಂಡರು.
ನಟಿಯಾದ ಬಳಿಕ ಮುಕ್ತವಾಗಿ ಬದುಕುವುದನ್ನು ಮರೆತಿದ್ದೇನೆ. ನನಗೆ ಪಾರ್ಕ್ಗಳಲ್ಲಿ ನಡೆಯುವುದು ತುಂಬಾ ಇಷ್ಟ. ಆದರೆ, ಈಗ ಆ ರೀತಿ ಆಗುವುದಿಲ್ಲ. ಕೆಲವೊಮ್ಮೆ ನನಗೆ ಇದೆಲ್ಲವೂ ಬೇಕು ಅನಿಸುತ್ತದೆ. ಆದರೆ, ಸಾರ್ವಜನಿಕವಾಗಿ ಹೋಗಲು ಸಾಧ್ಯವಿಲ್ಲದಿರುವುದರಿಂದ ಸಿನಿಮಾ ಕ್ಷೇತ್ರವನ್ನೇ ತೊರೆಯಬೇಕು ಅನಿಸುತ್ತಿದೆ ಎಂದು ನಿತ್ಯಾ ಹೇಳೀದರು. ಇದೀಗ ನಿತ್ಯಾ ಅವರು ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಕಾರಣಕ್ಕೂ ಸಿನಿಮಾ ರಂಗವನ್ನು ತೊರೆಯಬೇಡಿ ಎಂದು ನಿತ್ಯಾರ ಬಳಿ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.
ನಿತ್ಯಾ ಮೆನನ್ ಅವರು ಈ ಹಿಂದೆ ತಿರುಚಿತ್ರಂಬಲಂ ಸಿನಿಮಾ ಸಮಯದಲ್ಲೂ ಇದೇ ಮಾತನ್ನು ಹೇಳಿದ್ದರು. ನಿತ್ಯಾ ಮೆನನ್ ನಟಿಸಿದ ತಿರುಚಿತ್ರಂಬಲಂ ಸಿನಿಮಾ ಉತ್ತಮ ಯಶಸ್ಸನ್ನು ಕಂಡಿತು. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ನಿತ್ಯಾ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಪ್ರಸ್ತುತ ನಿತ್ಯಾ ಅವರ ‘ಕಾದಲಿಕ್ಕಾ ನೆರಮಿಲೈ’ ಚಿತ್ರದ ಬಿಡುಗಡೆಯಾಗಿ ಉತ್ತರ ಪ್ರದರ್ಶನ ಕಾಣುತ್ತಿದೆ. ಅವರ ಕೈಯಲ್ಲಿ ಇನ್ನೂ ನಾಲ್ಕು ಚಿತ್ರಗಳಿವೆ. ಇಡ್ಲಿ ಕಡಾಯ್ ಸಿನಿಮಾದಲ್ಲಿ ಮತ್ತೆ ಧನುಷ್ಗೆ ನಾಯಕಿಯಾಗಿದ್ದಾರೆ. (ಏಜೆನ್ಸೀಸ್)
ಬೇಕಂತಲೇ ಕಿಸ್ಸಿಂಗ್ ದೃಶ್ಯ ಸೇರಿಸಿದ್ರಾ ಧನುಷ್!? ಬಿರುಗಾಳಿ ಎಬ್ಬಿಸಿದ ಖ್ಯಾತ ನಿರ್ದೇಶಕನ ಹೇಳಿಕೆ! Dhanush