

ಮೈಸೂರು: ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರನಾಥ್ ಅಸಹಾಯಕತೆ ವ್ಯಕ್ತಪಡಿಸಿರುವ ಆಡಿಯೋ ಇದೀಗ ವೈರಲ್ ಆಗಿದೆ. ರೋಗಿ ಸಂಬಂಧಿಕರ ಜತೆ ಮಾತನಾಡಿರುವ ಫೋನ್ ಸಂಭಾಷಣೆ ಇದಾಗಿದ್ದು, ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದ ವ್ಯಕ್ತಿಗೆ ‘ವಾರ್ ರೂಮ್ೆ ಕರೆ ಮಾಡಿ ಅಲ್ಲಿ ಅರೇಂಜ್ ಮಾಡಿಕೊಡುತ್ತಾರೆ’ ಎಂದು ಡಾ.ಅಮರನಾಥ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ‘ಅವರು ಸ್ಪಂದಿಸುತ್ತಿಲ್ಲ’ ಎಂದು ರೋಗಿ ಸಂಬಂಧಿ ಹೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್ಒ, ‘ಬೆಡ್ಗೂ, ನನಗೂ ಸಂಬಂಧ ಇಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ. ನನ್ನ ಹೆಂಡತಿಗೂ ಬೆಡ್ ಕೊಡಿಸಲು ಆಗಿಲ್ಲ. ನನ್ನ ಕೈ ಸೋತೋಗಿದೆ’ ಎಂದು ಬೇಸರ ಹೊರಹಾಕಿದ್ದಾರೆ. ಇದರಿಂದ ಅಸಮಾಧಾನಗೊಂಡ ಕರೆ ಮಾಡಿದಾತ ‘ನಿಮಗೆ ಈ ಜವಾಬ್ದಾರಿ ಏಕೆ, ಕೆಲಸ ಬಿಟ್ಟೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಡಿಎಚ್ಒ, ‘ಕೆಲಸದಿಂದ ಕಳುಹಿಸಿದರೆ ಬಿಟ್ಟೋಗಲು ರೆಡಿ ಇದ್ದೇನೆ. ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ, ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.