

India: 'ಮೊದಲು ನಾನು ಪಾಕಿಸ್ತಾನದ ಮಗಳಾಗಿದ್ದೆ, ಆದರೆ ಈಗ ನಾನು ಭಾರತದ ಸೊಸೆ' ಎಂದು ಭಾರತೀಯನನ್ನು ಮದುವೆಯಾಗಿರುವ ಪಾಕಿಸ್ತಾನ ಮಹಿಳೆ ಸೀಮಾ ಹೈದರ್ ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಮಂಗಳವಾರ (ಏ.22)ಕ್ಕೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರ ಎಲ್ಲಾ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಮಾಡಿ, 48 ಗಂಟೆಯೊಳಗೆ ಭಾರತವನ್ನು ಬಿಟ್ಟು ಹೋಗುವಂತೆ ಆದೇಶ ನೀಡಿತ್ತು ಇದರ ಬೆನ್ನಲ್ಲೇ ಸೀಮಾ ಹೈದರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸೀಮಾ ಹೈದರ್ 2023ರಲ್ಲಿ ಪಾಕಿಸ್ತಾನವನ್ನು ತೊರೆದು ತನ್ನ ಭಾರತೀಯ ಪ್ರೇಮಿ ಸಚಿನ್ನ್ನು ಮದುವೆಯಾಗಿ ಭಾರತಕ್ಕೆ ಬಂದಾಗ ಈ ಸುದ್ದಿ ಸಖತ್ ವೈರಲ್ ಆಗಿತ್ತು. ಸೀಮಾ ಮದುವೆಯಾಗಿದ್ದು, ತನ್ನ ನಾಲ್ವರು ಮಕ್ಕಳೊಂದಿಗೆ ಆಕೆಯ ಪ್ರಿಯಕರನಿಗಾಗಿ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಬಂದಿದ್ದಳು.
"ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ನನಗೆ ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಮನವಿ ಮಾಡುತ್ತೇನೆ " ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರದ ನಂತರ, ಸೀಮಾ ಹೈದರ್ ಭಾರತದಲ್ಲಿಯೇ ಉಳಿಯಲು ಮನವಿ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. (ಏಜೆನ್ಸೀಸ್)