ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮೇಲೆ ವಿಧಿಸಿರುವ ನಿರ್ಬಂಧ ಸಡಿಲಗೊಳಿಸುವಂತೆ ಪ್ರಧಾನಿಗೆ ಮನವಿ ಮಾಡಿದ ಟ್ರಂಪ್​

donald trump
Published on

ವಾಷಿಂಗ್​​ಟನ್​: ಮಲೇರಿಯಾ ರೋಗಕ್ಕೆ ಬಳಕೆ ಮಾಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ನಿರ್ಬಂಧ ತೆರವುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಟ್​ ಟ್ರಂಪ್​ ಹೇಳಿದ್ದಾರೆ.

ಭಾರತದಲ್ಲಿ ಕರೊನಾ ವೈರಸ್​ ಹರಡುವುದು ತೀವ್ರಗೊಳ್ಳುತ್ತಿದ್ದಂತೆ ಭಾರತ ಸರ್ಕಾರ ಮಾತ್ರೆ ರಫ್ತು ಮಾಡುವುದನ್ನು ನಿಲ್ಲಿಸಿತು. ಭಾರತದಲ್ಲಿ ಅಧಿಕ ಜನಸಂಖ್ಯೆ ಇರುವುದರಿಂದ ತುರ್ತು ಸಮಯದಲ್ಲಿ ಬಳಸಿಕೊಳ್ಳಲು ರಫ್ತು ಮಾಡುವುದನ್ನು ನಿಲ್ಲಿಸಿದೆ. ಅಮೆರಿಕಾದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾತ್ರೆ ರಫ್ತು ಮಾಡಲು ವಿಧಿಸಿರುವ ನಿರ್ಬಂಧ ಹಿಂದಕ್ಕೆ ಪಡೆಯುವಂತೆ ಕೋರಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕರೊನಾ ಸೋಂಕು ಪೀಡಿತರಿಗೆ ನೀಡುವ ಬಗ್ಗೆ ನಾನು ವೈದ್ಯರೊಂದಿಗೆ ಚರ್ಚಿಸಿದ್ದೇನೆ. ವೈದ್ಯರು ಮಾತ್ರೆ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ. ಹೀಗಾಗಿ ಭಾರತಕ್ಕೆ ಮಾತ್ರೆ ರಫ್ತು ಮಾಡುವಂತೆ ಕೋರಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಮುಂದಿನ 2 ವಾರಗಳಲ್ಲಿ ಅಮೆರಿಕಾದಲ್ಲಿ ಕರೊನಾ ವೈರಸ್​ ಸೋಂಕಿನಿಂದ ಸಾಕಷ್ಟು ಸಾವು ಸಂಭವಿಸಬಹುದು. ಹೀಗಾಗಿ ಅಮೆರಿಕನ್ನರಿಗೆ ಮುಂದಿನ 2 ವಾರಗಳು ಕಠಿಣವಾಗಲಿವೆ. ಇದನ್ನು ಎದುರಿಸಲು ಎಲ್ಲರು ಸಜ್ಜಾಗಬೇಕು ಎಂದರು.

ಕೆಲವು ಮುನ್ನೆಚ್ಚರಿಕೆ ತೆಗೆದುಕೊಂಡರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ಅಮೆರಿಕಾದಲ್ಲಿ 3 ಲಕ್ಷ ಮಂದಿಗೆ ಸೋಂಕು ಹರಡಿದೆ. ಇದರಲ್ಲಿ 8,291 ಮಂದಿ ಮೃತಪಟ್ಟಿದ್ದಾರೆ. ಇನ್ನಷ್ಟು ಸಾವು ಸಂಭವಿಸಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net