

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಪತಿಗೆ ವಿಷ ಬೆರೆಸಿದ ಆಹಾರ ನೀಡಿದ್ದಲ್ಲದೆ ಬಳಿಕ ಪ್ರಿಯಕರನ ಜತೆಗೂಡಿ ಬೆಡ್ಶೀಟ್ನಿಂದ ಉಸಿರುಗಟ್ಟಿಸಿ ಪತ್ನಿಯೇ ಕೊಲೆಗೈದ ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ(44) ಕೊಲೆಯಾದವರು. ಪತ್ನಿ ಪ್ರತಿಮಾ ಪತಿ ಬಾಲಕೃಷ್ಣ ಅವರಿಗೆ ವಿಷ ಬೆರೆಸಿದ ಆಹಾರ ನೀಡಿದ್ದು, ಸೇವಿಸಿದ ಬಾಲಕೃಷ್ಣ ಕಾಮಾಲೆ ಸಹಿತ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿ ಅ.19ರಂದು ಮನೆಗೆ ಮರಳಿದ್ದರು. ಅಂದು ರಾತ್ರಿ ಅವರು ಮಲಗಿದ್ದ ವೇಳೆ ಪ್ರತಿಮಾ ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಎಂಬಾತನ ಜತೆಗೂಡಿ ಬೆಡ್ಶೀಟ್ನಿಂದ ಉಸಿರುಗಟ್ಟಿಸಿ ಬಾಲಕೃಷ್ಣ ಅವರನ್ನು ಹತ್ಯೆಗೈದಿದ್ದಾರೆ.
ಅ.20ರಂದು ರಾತ್ರಿ ತನಕ ಆರೋಗ್ಯವಾಗಿದ್ದ ಬಾಲಕೃಷ್ಣ ಮರುದಿನ ಮೃತಪಟ್ಟಿರುವ ಸುದ್ದಿ ಕೇಳಿ ಅನುಮಾನಗೊಂಡ ಬಾಲಕೃಷ್ಣ ತಂದೆ ಹಾಗೂ ಪ್ರತಿಮಾ ಅಣ್ಣ ಸಂದೀಪ್ ಅವರು ಅಜೆಕಾರು ಪೊಲೀಸರಿಗೆ ದೂರು ನೀಡಿದ್ದರು. ಬಾಲಕೃಷ್ಣ ಅವರ ಮರಣದ ಐದನೇ ದಿನದ ಕಾರ್ಯ ನಡೆಯುತ್ತಿದ್ದ ಸಂದರ್ಭ ಪ್ರತಿಮಾ, ಸಂದೀಪ್ನಲ್ಲಿ ನಿಜ ವಿಚಾರ ಬಾಯಿ ಬಿಟ್ಟಿದ್ದಾಳೆ. ಮಧ್ಯರಾತ್ರಿ 2 ಗಂಟೆ ವೇಳೆಗೆ ಪ್ರಿಯಕರ ದಿಲೀಪ್ ಹೆಗ್ಡೆ ಜತೆಗೂಡಿ ಉಸಿರುಗಟ್ಟಿಸಿ ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ. ತಕ್ಷಣ ಸಂದೀಪ್ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಕಳ ನಿವಾಸಿ ದಿಲೀಪ್ ಹೆಗ್ಡೆ(28) ಪ್ರತಿಮಾಳಿಗೆ ಮೊದಲೇ ಪರಿಚಿತನಾಗಿದ್ದು, ಜತೆಯಾಗಿ ಸುತ್ತಾಡುತ್ತಿದ್ದರು. ಈ ಬಗ್ಗೆ ಬಾಲಕೃಷ್ಣ ಅವರು ದಿಲೀಪ್ ಹೆಗ್ಡೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು. ಬಳಿಕ ಪ್ರತಿಮಾ ಹಾಗೂ ಪತಿ ಬಾಲಕೃಷ್ಣ ಮಧ್ಯೆ ಮನಸ್ತಾಪ ಉಂಟಾಗಿತ್ತು. ಪ್ರತಿಮಾ ಹಾಗೂ ದಿಲೀಪ್ ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದ ಬಾಲಕೃಷ್ಣ ಪೂಜಾರಿ ಅವರನ್ನು ಹತ್ಯೆಗೈಯಲು ಎರಡು ತಿಂಗಳ ಹಿಂದೆಯೇ ಯೋಜನೆ ರೂಪಿಸಿದ್ದರು.
ಆರೋಪಿ ಪ್ರತಿಮಾ ಅಜೆಕಾರಿನಲ್ಲಿ ಬ್ಯೂಟಿಪಾರ್ಲರ್ ಹೊಂದಿದ್ದು, ಪತಿ ಬಾಲಕೃಷ್ಣ ಸ್ವಂತ ಕ್ಯಾಂಟೀನ್ ನಡೆಸುತ್ತಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್ಗಳಿಂದ ಖ್ಯಾತಿ ಪಡೆದಿದ್ದರು.
ಪ್ರತಿಮಾ ಅಣ್ಣ ಸಂದೀಪ್ ಹಾಗೂ ಕೊಲೆಯಾದ ಬಾಲಕೃಷ್ಣ ಈ ಹಿಂದೆ ಜತೆಯಾಗಿ ಮುಂಬೈನಲ್ಲಿ ಉದ್ಯೋಗದಲ್ಲಿದ್ದು, ಗೆಳೆಯರಾಗಿದ್ದರು. ತನ್ನ ಸಹೋದರಿಯೇ ಗೆಳೆಯನನ್ನು ಹತ್ಯೆ ಮಾಡಿರುವ ವಿಷಯ ತಿಳಿದ ಕೂಡಲೇ ಆಕೆಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಮಿತ್ರನ ಸಾವಿಗೆ ಕಾರಣರಾದ ಇಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಸಂದೀಪ್ ಆಗ್ರಹಿಸಿದ್ದಾರೆ.