

ಶಿರ್ವ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎರಡನೇ ಬಾರಿ ನ್ಯಾಕ್ ಮಾನ್ಯತೆ ನೀಡುವ ಸಲುವಾಗಿ ಪರಿಣತರ ತಂಡ ಇತ್ತಿಚೆಗೆ ಕಾಲೇಜಿಗೆ ಭೇಟಿ ನೀಡಿತು.
ಹರಿಯಾಣದ ಓಂ ಸ್ಟೆರ್ಲಿಂಗ್ ಗ್ಲೋಬಲ್ ವಿಶ್ವ ವಿದ್ಯಾಲಯ ಸಹಕುಲಪತಿ ಡಾ.ರಾಜೇಂದ್ರ ಸಿಂಗ್ ಚಿಲ್ಲರ್, ಪುಣೆಯ ಸಿಂಬಯೋಸಿಸ್ ತಾಂತ್ರಿಕ ಮಹಾವಿದ್ಯಾಲಯದ ಡಾ.ಆನಂದ್ ಕುಮಾರ್ ಪಾಂಡೆ ಮತ್ತು ಮುಂಬೈ ವಿಶ್ವವಿದ್ಯಾಲಯದ ರತ್ನಗಿರಿ ಕೇಂದ್ರದ ನಿರ್ದೇಶಕ ಡಾ.ಕಿಶೋರ್ ಸುಖಾತಂಕರ್ ಒಳಗೊಂಡ ನ್ಯಾಕ್ ತಂಡ ಎರಡು ದಿನಗಳ ಕಾಲ ಕಾಲೇಜಿನ ಮೂಲಸೌಕರ್ಯ ತಪಾಸಣೆ ಮತ್ತು ದಾಖಲಾತಿಗಳ ಪರಿಶೀಲಿಸಿತು. ಬಳಿಕ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಸಹಿತ ಹಲವರೊಂದಿಗೆ ಸಂವಾದ ನಡೆಸಿತು. ಈ ಸಂದರ್ಭ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ನ್ಯಾಕ್ ತಂಡ ಮೆಚ್ಚುಗೆ ವ್ಯಕ್ತಪಡಿಸಿತು. ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸಲಹೆ ಸೂಚನೆ ಒಳಗೊಂಡ ವರದಿಯನ್ನು ನ್ಯಾಕ್ ತಂಡ ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿತು. ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕದ ಸಂಚಾಲಕ ಡಾ.ಸುದರ್ಶನ್ ರಾವ್.ಕೆ ವಂದಿಸಿದರು.