ಗಂಡನ ತೊರೆದ ಅಕ್ಕನಮಗಳ ಮದುವೆಯಾಗಿ ಪೆಟ್ರೋಲ್‌ ಸುರಿದು ಕೊಂದ!

fireweb
Published on

ಬೆಂಗಳೂರು: ಕೌಟುಂಬಿಕ ಕಲಹದಿಂದ ಗಂಡನನ್ನು ತೊರೆದುಬಂದಿದ್ದ ಅಕ್ಕನ ಮಗಳನ್ನು ಅಯ್ಯೋ ಪಾಪ ಎಂದು ಮದುವೆಯಾಗಿ, ಈಗ ಪೆಟ್ರೋಲ್‌ ಹಾಕಿ ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಯರಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರು ಗಂಗಮ್ಮಾ ಎನ್ನುವ ಮಹಿಳೆ. ಸಿದ್ಧರಾಜು ಆರೋಪಿ. ಕಳೆದ ತಿಂಗಳು ಇವರಿಬ್ಬರ ನಡುವೆ ಜಗಳವಾಗಿದ್ದು, ಪತ್ನಿಯ ಮೇಲೆ ಸಿದ್ಧರಾಜು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಗಂಗಮ್ಮಾ ಮೃತಪಟ್ಟಿದ್ದಾರೆ.

ಗಂಗಮ್ಮಾ ಅವರು ಆರೇಳು ವರ್ಷಗಳ ಹಿಂದೆ ಹಾಸನದ ದೇವರಾಜು ಎನ್ನುವವರನ್ನು ಮದುವೆಯಾಗಿದ್ದರು. ಆದರೆ ದಾಂಪತ್ಯದಲ್ಲಿ ಬಿರುಕು ಮೂಡಿ, ಗಂಗಮ್ಮಾ ಗಂಡನ ಮನೆ ತೊರೆದು ತವರಿಗೆ ವಾಪಸಾಗಿದ್ದರು. ಅಲ್ಲಿಯೇ ಇದ್ದ ಗಂಗಮ್ಮಾ ಅವರ ತಾಯಿಯ ತಮ್ಮ ಸಿದ್ಧರಾಜು ಗಂಗಮ್ಮಾ ಜೀವನ ಹಾಳಾಯಿತಲ್ಲ ಎಂದು ನೊಂದುಕೊಂಡು ತಾನೇ ಮದುವೆಯಾಗಿದ್ದ. ಬೆಂಗಳೂರಿನ ಯಲಹಂಕ ಬಳಿಯ ಜಕ್ಕೂರಿನಲ್ಲಿ ಇವರು ನೆಲೆಸಿದ್ದರು.

ಆದರೆ ಒಂದೆರಡು ವರ್ಷಗಳಿಂದ ದಂಪತಿ ನಡುವೆ ಕಲಹ ಶುರುವಾಗಿತ್ತು. ನೀನು ನನ್ನನ್ನು ಎರಡನೆ ಮದುವೆ ಮಾಡಿಕೊಂಡಿರುವಿ, ನಾನ್ಯಾಕೆ ಬೇರೆ ಯುವತಿಯೊಂದಿಗೆ ಎರಡನೇ ಮದುವೆ ಮಾಡಿಕೊಳ್ಳಬಾರದು ಎಂದೆಲ್ಲಾ ಪತ್ನಿಯನ್ನು ಕೇಳುತ್ತಿದ್ದ, ಈ ಕುರಿತು ಸಾಯುವ ಮುನ್ನ ಗಂಗಮ್ಮಾ ಅವರು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ.

ಜೂನ್ 13ರಂದು ಇದೇ ವಿಚಾರವಾಗಿ ಇಬ್ಬರಲ್ಲಿಯೂ ಜಗಳವಾಗಿದೆ. ಗಾಡಿಗೆ ತುಂಬಿಸಲು ತಂದಿಟ್ಟ ಪೆಟ್ರೋಲ್‌ ಅನ್ನು ಸಿದ್ಧರಾಜು ಪತ್ನಿಯ ಮೈಮೇಲೆ ಸುರಿದು ಬೆಂಕಿ ಇಟ್ಟಿರುವುದಾಗಿ ಗಂಗಮ್ಮಾ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ದರಾಜುನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net