ತವರಿಗೆ ಹೋದ ಹೆಂಡತಿ ಸೋಶಿಯಲ್​ ಮೀಡಿಯಾ ಲೈವ್​ನಲ್ಲಿ ಪ್ರತ್ಯಕ್ಷ! ವಿಡಿಯೋ ನೋಡುತ್ತಿದ್ದಂತೆಯೇ ತಲೆ ತಿರುಗಿ ಬಿದ್ದ ಪತಿ!

china
Published on

ಬೀಜಿಂಗ್​: ಅಮ್ಮನ ನೆನಪಾಗುತ್ತಿದೆ. ತವರಿಗೆ ಹೋಗಿ ಬರುತ್ತೇನೆ ಎಂದು ಹೇಳಿಹೋದ ಹೆಂಡತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್​ನಲ್ಲಿ ಕಂಡ ಪತಿ ತಲೆ ತಿರುಗಿ ಬಿದ್ದಿರುವ ಘಟನ ಚೀನಾದಲ್ಲಿ ನಡೆದಿದೆ. ಎರಡು ತಿಂಗಳ ಹಿಂದಷ್ಟೇ ತನ್ನನ್ನು ಮದುವೆಯಾಗಿದ್ದ ಆಕೆ ಇದೀಗ ಬೇರೊಬ್ಬನ ಜತೆ ಮದುವೆಯಾಗುತ್ತಿದ್ದುದ್ದನ್ನು ಕಂಡ ಆತ ಕಂಗಾಲಾಗಿದ್ದಾನೆ.

ಚೀನಾದಲ್ಲಿ ಇಂತದ್ದೊಂದು ಕತರ್ನಾಕ್​ ಲೇಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಯುವತಿಯ ಕೆಲಸವೇ ಮದುವೆಯಾಗಿ ಅವರಿಂದ ಹಣ ಲಪಟಾಯಿಸಿ ಬೇರೆ ಮದುವೆಯಾಗುವುದಾಗಿತ್ತಂತೆ. ಅಂದ ಹಾಗೆ ಆ ಯುವತಿ ಈಗಾಗಲೇ ಬರೋಬ್ಬರಿ 19 ಮದುವೆಯಾಗಿದ್ದಾಳೆ.

ಹೆಂಡತಿ ತವರಿಗೆ ಹೋಗಿ ದಿನಗಳು ಕಳೆದಿವೆ. ಆಕೆ ಇನ್ನೂ ಬಂದಿಲ್ಲವಲ್ಲ ಎನ್ನುವ ಬೇಸರದಿಂದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣ ನೋಡುತ್ತಿರುವಾಗ ಯಾವುದೋ ಮದುವೆ ಲೈವ್​ ಸ್ಕ್ರೀಮ್​ ಆಗುತ್ತಿರುವುದು ಕಂಡುಬಂದಿದೆ. ಸುಮ್ಮನೆ ವಿಡಿಯೋ ಮೇಲೆ ಕಣ್ಣಾಡಿಸಿದಾಗ ಅಲ್ಲಿ ತನ್ನ ಹೆಂಡತಿಯೇ ವಧುವಾಗಿರುವುದು ಕಂಡಿದೆ. ಅಘಾತದಿಂದಾಗಿ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಮನೆಯವರು ಆತನನ್ನು ಎಚ್ಚರಿಸಿ, ನೂತನ ವರನ ಮನೆಗಾಗಿ ಹುಡುಕಾಡಿದ್ದಾರೆ. ಆಮೇಲೆ ಆ ಸ್ಥಳಕ್ಕೆ ಪೊಲೀಸರಿಗೂ ಬರುವಂತೆ ತಿಳಿಸಲಾಗಿದೆ.

ಸ್ಥಳಕ್ಕೆ ಬಂದ ಪೊಲೀಸರು ಯುವತಿ ಮತ್ತು ಆಕೆಗೆ ಸಾಥ್​ ನೀಡಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆಕೆ ತಾನು ಮಾಡಿರುವ ಮೋಸದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಮದುವೆಯಾದ ಹುಡುಗರಿಂದ ಲಕ್ಷಗಟ್ಟಲೆ ಹಣ ಪೀಕಿರುವುದಾಗಿ ಒಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net