

ನವದೆಹಲಿ: ಹೊರ ದೆಹಲಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ಅಡುಗೆ ಮತ್ತು ಮನೆಕೆಲಸಗಳನ್ನು ಮಾಡದಿದ್ದಕ್ಕಾಗಿ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಬಜರಂಗಿ ಗುಪ್ತಾ ಎಂದು ಗುರುತಿಸಲಾಗಿದೆ, ಭಾನುವಾರ ತನ್ನ 22 ವರ್ಷದ ಅನಾರೋಗ್ಯ ಪೀಡಿತ ಪತ್ನಿ ಪ್ರೀತಿಗೆ ಕೋಲಿನಿಂದ ಹಲ್ಲೆ ಮಾಡಿದ್ದು, ಅದು ಆಕೆಯ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀತಿ ರಕ್ತಹೀನತೆಯಿಂದ ಬಳಲುತ್ತಿದ್ದು ದುರ್ಬಲಳಾಗಿದ್ದಳು. ಅದಲ್ಲದೇ ಆಕೆ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಳು. ಆದ್ದರಿಂದ ಅವಳು ಮನೆಕೆಲಸಗಳನ್ನು ಮಾಡಲು ಅಥವಾ ನಿಯಮಿತವಾಗಿ ಅಡುಗೆ ಮಾಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದರು. ಆದರೂ ಕೋಪದ ಭರದಲ್ಲಿ ಆಕೆಯ ಪತಿ ಮಹಿಳೆಯನ್ನು ಕೊಂದಿದ್ದಾನೆ.
ಬಜರಂಗಿ ಬಳಸಿದ ಕೋಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಪತ್ನಿಯ ಮೇಲೆ ಕೋಪಗೊಂಡು ಆಕೆಯನ್ನು ಕೊಂದಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಬಜರಂಗಿ ಕೆಲಸ ಮುಗಿಸಿಕೊಂಡು ಬಂದು ಮೇಜಿನ ಮೇಲೆ ಊಟ ಇಲ್ಲದಿರುವುದನ್ನು ಕಂಡು ಪತ್ನಿಯೊಂದಿಗೆ ತೀವ್ರ ಜಗಳವಾಡಿದ್ದಾನೆ. “ಪರಿಸ್ಥಿತಿ ಉದ್ವಿಗ್ನಗೊಂಡಿತು ಮತ್ತು ಅವನು ಮರದ ಕೋಲನ್ನು ತೆಗೆದುಕೊಂಡು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಮಹಿಳೆ ಕುಸಿದು ಬಿದ್ದಿದ್ದಾರೆ, ನಂತರ ಪತಿ ಮನೆಯಿಂದ ಓಡಿಹೋಗಿದ್ದಾನೆ.”ಎಂದು ಅಧಿಕಾರಿಯೊಬ್ಬರು ಹೇಳಿದರು. ಹಲ್ಲೆಗೊಳಗಾದ ಪ್ರೀತಿಯನ್ನು ಆಕೆಯ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದರು ಎಂದು ಹೇಳಲಾಗಿದೆ.
ಮೂರು ವರ್ಷಗಳ ಹಿಂದೆ ಪ್ರೀತಿಯನ್ನು ವಿವಾಹವಾಗಿದ್ದ ಬಜರಂಗಿ ಗುಪ್ತಾ ಆಕೆಯನ್ನು ಥಳಿಸುತ್ತಿದ್ದ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಮೂರು ತಿಂಗಳ ಹಿಂದೆ ಮಹಿಳೆ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದಳು.