

Divorce: ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಮುಖ್ಯ. ಉತ್ತಮ ಜೀವನ ನಡೆಸಲು, ಒಂದೊಳ್ಳೆ ಕೆಲಸ ಮತ್ತು ಅದಕ್ಕೆ ತಕ್ಕಂತ ಸಂಬಳ ಬೇಕೇ ಬೇಕು. ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ಫಲಿತಾಂಶಗಳು ನೀವು ಬಯಸಿದಂತೆಯೇ ಇರುತ್ತದೆ ಎಂಬುದಕ್ಕೆ ಯಾವುದೇ ಅನುಮಾನ ಬೇಡ. ಶ್ರಮವಹಿಸಿ ದುಡಿದರೆ, ಅಲ್ಲಿ ನಿಮಗೆ ಬಡ್ತಿಯೂ ಸಿಗುತ್ತದೆ, ನಿರೀಕ್ಷಿಸಿದ ಸಂಬಳವೂ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ಬಯಸುವುದು ಇದನ್ನೇ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಮಗಿಂತ, ನಮ್ಮ ಆರೋಗ್ಯ ಮತ್ತು ಕುಟುಂಬಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಅತೀ ಮುಖ್ಯ. ಸದ್ಯ ಈ ವ್ಯಕ್ತಿಯ ಬಾಳಿನಲ್ಲಿ ಆಗಿದ್ದು ಇದೇ ಸಮಸ್ಯೆ.
ನಿಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬಕ್ಕಿಂತ ಉದ್ಯೋಗ, ಪ್ರಮೋಷನ್ ಮುಖ್ಯ ಎಂದು ಭಾವಿಸಿದರೆ, ಖಂಡಿತ ಅದಕ್ಕೆ ಭಾರಿ ಬೆಲೆಯನ್ನೇ ತೆರಬೇಕಾಗುತ್ತದೆ ಎಂಬುದಕ್ಕೆ ಈ ವ್ಯಕ್ತಿಯ ಜೀವನ ಉದಾಹರಣೆ. ಜೀವನದಲ್ಲಿ ಕೆಲಸ ಎಷ್ಟು ಮುಖ್ಯವೋ, ಕುಟುಂಬವೂ ಅಷ್ಟೇ ಮುಖ್ಯ. ಕಂಪನಿ ಕೆಲಸದ ಜತೆಗೆ, ಹೆಂಡತಿ ಮತ್ತು ಮಕ್ಕಳನ್ನು ಸಹ ನೋಡಿಕೊಳ್ಳುವುದು ಒಬ್ಬ ಗಂಡನ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ. ನಮ್ಮವರಿಗೆ, ನಮ್ಮ ಪ್ರೀತಿ ಪಾತ್ರರಿಗೆ ಸಮಯ ಮೀಸಲಿಡಬೇಕು.
ನಮ್ಮವರಿಗೆ ಸಮಯ ಕೊಡಬೇಕು, ಅವರನ್ನು ಸಂತೋಷ ಪಡಿಸಬೇಕು. ಇಲ್ಲದಿದ್ದರೆ, ನಂತರ ಸಂಭವಿಸುವ ಘಟನೆ, ದುರಾದೃಷ್ಟಗಳನ್ನು ಎದುರಿಸಲು ಗಟ್ಟಿ ಹೃದಯವೇ ಬೇಕು. ಇಲ್ಲೊಬ್ಬ ವ್ಯಕ್ತಿ ಸಾಫ್ಟ್ವೇರ್ ಉದ್ಯೋಗಿ ಆಗಿದ್ದು, ಉದ್ಯೋಗಕ್ಕಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಡಲು ಹೋಗಿ ಇದೀಗ ತನ್ನನ್ನು ಪ್ರೀತಿಸುವ ಕುಟುಂಬವನ್ನು ದೂರ ಮಾಡಿಕೊಂಡಿದ್ದಾನೆ. ಕೆಲಸ, ಮೀಟಿಂಗ್, ಪ್ರಮೋಷನ್ ಎಂದು ಓಡಾಡಿದವನಿಗೆ ಅಂತಿಮವಾಗಿ 7.8 ಕೋಟಿ ರೂ. ಸಂಬಳ ಸಿಕ್ಕಿದ್ದೇನೋ ನಿಜ. ಆದರೆ, ಆ ಖುಷಿ ವಿಷಯವನ್ನು ಹೇಳಲು ಹೆಂಡತಿಯೇ ಜತೆಗೆ ಇಲ್ಲದಿರುವುದು ದುರಾದೃಷ್ಟ.
ಟೆಕ್ಕಿಯಾಗಿ ತನ್ನ ವೃತ್ತಿಜೀವನವನ್ನು ನೋಡಿದ ವ್ಯಕ್ತಿ, ತನ್ನ ಬಾಳಿನಲ್ಲಿ ಆದ ಕಹಿ ಅನುಭವವನ್ನು ಜಾಲತಾಣದಲ್ಲಿ ಎಲ್ಲರೊಂದಿಗೆ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. "ಮೂರು ವರ್ಷಗಳ ಹಿಂದೆ, ನಾನು ಒಂದು ಕಂಪನಿಗೆ ಸೇರಿಕೊಂಡೆ. ಕೆಲಸದಲ್ಲಿ ಹಂತ ಹಂತವಾಗಿ ಬೆಳೆಯುವ ಗುರಿಯನ್ನು ಹೊಂದಿದ್ದೆ. ಅದಕ್ಕೆ ತಕ್ಕಂತೆ ನಿರಂತರವಾಗಿ ಶ್ರಮಿಸಿದೆ. ಕೆಲವೊಮ್ಮೆ ದಿನಕ್ಕೆ 14 ಗಂಟೆಗಳ ಕಾಲ ದುಡಿದೆ. ನಾನು ಕೆಲಸಕ್ಕೆ ತುಂಬಾ ಪ್ರಾಮುಖ್ಯತೆ ನೀಡಿದೆ. ಆದರೆ, ಇದೇ ಇಂದು ನನ್ನ ಪತ್ನಿ ವಿಚ್ಛೇದನ ನೀಡುವಂತೆ ಮಾಡಿತು" ಎಂದಿದ್ದಾರೆ.
"ದಿನದಿಂದ ದಿನಕ್ಕೆ ಕೆಲಸದ ಹೊರೆ ಹೆಚ್ಚಾಯಿತು. ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಮೀಟಿಂಗ್ಗಳು ಇದ್ದವು. ಇದರಿಂದಾಗಿ, ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ನಾನು ತುಂಬಾ ಬಿಜಿ ಆಗಿರುತ್ತಿದ್ದೆ. ನನ್ನ ಮಗು ಹುಟ್ಟಿದಾಗಲೂ ನಾನು ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. ಬಹು ಸಮಯವನ್ನು ಮೀಟಿಂಗ್ನಲ್ಲೇ ಕಳೆದಿದ್ದೇನೆ. ಪತ್ನಿಯ ಹೆರಿಗೆಯಲ್ಲಿಯೂ ಜತೆಗಿರಲಿಲ್ಲ. ಇದರಿಂದ ನನ್ನ ಹೆಂಡತಿ ಖಿನ್ನತೆಗೆ ಒಳಗಾದಳು. ಆ ಸಮಯದಲ್ಲಿಯೂ, ನಾನು ಅವಳ ಜತೆಗೆ ಇರಲಿಲ್ಲ" ಎಂದರು.
"ನನ್ನ ಹೆಂಡತಿ ಅಸ್ವಸ್ಥಳಾಗಿದ್ದರೂ ಸಹ ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲು ನನಗೆ ಸಮಯ ಆಗಲಿಲ್ಲ. ಇದು ನನ್ನ ಕೆಲಸ ಮತ್ತು ಮೀಟಿಂಗ್ಳಿಂದಾಗಿ ಆದ್ದದ್ದು. ಅಂತಿಮವಾಗಿ ಇದಕ್ಕೆಲ್ಲ ಬಂದ ಅನಿರೀಕ್ಷಿತ ಉತ್ತರವೇ ವಿಚ್ಛೇದನ. ನನ್ನ ನಡವಳಿಕೆಯಿಂದ ಬೇಸತ್ತ ನನ್ನ ಪತ್ನಿ, ನನ್ನನ್ನು ಬಿಟ್ಟು ಹೋಗಲು ನಿರ್ಧರಿಸಿದಳು. ಇದೇ ಕಾರಣಕ್ಕೆ ಆಕೆ ನನಗೆ ಡಿವೋರ್ಸ್ ನೋಟಿಸ್ ಕಳಿಸಿದ್ದಾಳೆ. ಆಗ ನನಗೆ ಇದು ಅರ್ಥವಾಗಲಿಲ್ಲ. ಈಗ ಗೊತ್ತಾಗ್ತಿದೆ ನಾನು ಎಂಥಾ ದೊಡ್ಡ ತಪ್ಪು ಮಾಡಿದೆ ಅಂತ" ಎಂದಿದ್ದಾರೆ.
"ಉದ್ಯೋಗದಲ್ಲಿ ದೊಡ್ಡ ಗುರಿಯನ್ನು ಸಾಧಿಸಿ, ಬಡ್ತಿ ಪಡೆಯುವ ಭರದಲ್ಲಿ ನನ್ನ ವೈಯಕ್ತಿಕ ಜೀವನವನ್ನೇ ನಾನು ಹಾಳು ಮಾಡಿಕೊಂಡೆ. ನಿರೀಕ್ಷಿಸಿದ ಸಂಬಳ ಪಡೆದೆ ಎಂದು ಸಂತಸ ಪಡಬೇಕೋ ಅಥವಾ ನನ್ನ ಹೆಂಡತಿ ನನ್ನನ್ನು ಬಿಟ್ಟು ಹೋದಳು ಎಂದು ದುಃಖಿಸಬೇಕೋ ತಿಳಿಯದ್ದಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).