ಕುಂದಾಪುರ: ಮನುಷ್ಯನ ಬದುಕಿನಲ್ಲಿ ನೈತಿಕ ಮೌಲ್ಯ ಪ್ರಧಾನ ಭೂಮಿಕೆ ವಹಿಸುತ್ತವೆ. ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿದರೆ ಸಮಾನತೆಯ ಸಮಾಜ ಕಟ್ಟಬಹುದು. ವಿದ್ಯಾರ್ಥಿಗಳು ನೈತಿಕ ಮೌಲ್ಯಗಳ ಮಹಾಮೇರುಗಳಾಗಿ ಭವಿಷ್ಯದಲ್ಲಿ ವಿಜೃಂಭಿಸಲು ಕುವೆಂಪು ಸೃಜಿಸಿದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಓದು ಸಹಕಾರಿ ಎಂದು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ರವಿರಾಜ ಶೆಟ್ಟಿ ಹೇಳಿದರು.

ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಕಾಲೇಜಿನ ಐಕ್ಯುಎಸಿ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಅನಲೆ ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಕೃಷ್ಣ ಸಾಸ್ತಾನ ಕುವೆಂಪು ಅವರ ಆಯ್ದ ಭಾವಗೀತೆ ಪ್ರಸ್ತುತಪಡಿಸಿದರು. ಐಕ್ಯುಎಸಿ ಸಂಚಾಲಕ ನಾಗರಾಜ ಯು., ಚಕೋರ ಉಡುಪಿ ಜಿಲ್ಲಾ ಸಂಚಾಲಕ ತಿಮ್ಮಪ್ಪ ಗುಲ್ವಾಡಿ ಉಪಸ್ಥಿತರಿದ್ದರು.
ಕನ್ನಡ ಸಂಘದ ಅಧ್ಯಕ್ಷ ನಾಗರಾಜ ವೈದ್ಯ ಎಂ. ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ ಶೆಟ್ಟಿ ಎಚ್. ಪ್ರಸ್ತಾವಿಸಿದರು. ಚಕೋರ ಉಡುಪಿ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ನಿರೂಪಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ರಶ್ಮಿ ಉಡುಪ ವಂದಿಸಿದರು.