

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್(WFI)ನ ನಿರ್ಗಮಿತ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಥವಾ ಅವರನ್ನು ಮುಟ್ಟುವುದು ಯಾವುದೇ ತರಹದ ಅಪರಾಧವಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಪ್ರಕರಣ ಸಂಬಂಧ ಬುಧವಾರ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಬ್ರಿಜ್ ಭೂಷಣ್ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ವಿರೋಧಿಸಿ ವಕೀಲರ ಮೂಲಕ ವಾದವನ್ನು ಮಂಡಿಸಿದ್ದಾರೆ. ಬ್ರಿಜ್ ಭೂಷಣ್ ಪರ ಹಿರಿಯ ವಕೀಲ್ ರಾಜೀವ್ ಮೋಹನ್ ವಕಾಲತ್ತು ವಹಿಸಿದ್ದಾರೆ. ನ್ಯಾಯಮೂರ್ತಿ ಹರ್ಜಿತ್ಸಿಂಗ್ ಜಸ್ಬಾಲ್ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ.
ಸಂಸದ ಬ್ರಿಜ್ ಭೂಷಣ್ ಪರ ವಾದ ಮಂಡಿಸಿದ ವಕೀಲ ರಾಜೀವ್ ಮೋಹನ್ ನಮ್ಮ ಕಕ್ಷಿದಾರರು ಆಟಗಾರರನ್ನು ದೆಹಲಿಯ ಅಶೋಕ ರಸ್ತೆ ಹಾಗೂ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ 20-25 ಸೆಕೆಂಡುಗಳ ಕಾಲ ತಬ್ಬಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತದ ಹೊರಡಗೆ ಕೂಡ ಅಪರಾಧ ನಡೆದಿದೆ ಎಂದು ಆರೋಪಿಸಲಾಗಿರುವುದರಿಂದ ನ್ಯಾಯಾಲಯಕ್ಕೆ ಈ ಪ್ರಕರಣ ವಿಚಾರಣೆ ನಡೆಸುವ ಯಾವುದೇ ಅಧಿಕಾರವಿಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಕುಸ್ತಿಪಟುಗಳು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಯಾವುದೇ ಲೈಂಗಿಕ ಉದ್ದೇಶವಿಲ್ಲದೆ ಆಟಗಾರರನ್ನು ತಬ್ಬಿಕೊಳ್ಳಲಾಗಿದೆ. ಇದು ಯಾವುದೇ ತರಹದ ಅಪರಾಧವಲ್ಲ. ಕುಸ್ತಿಯಂತಹ ಕ್ರೀಡೆಗಳಲ್ಲಿ ಕೋಚ್ ಹೆಚ್ಚಿನವರು ಪುರುಷರೇ ಆಗಿರುತ್ತಾರೆ. ಮಹಿಳಾ ಕೋಚ್ಗಳು ತರಬೇತಿ ನೀಡುವುದು ತೀರಾ ಅಪರೂಪ. ಆಟದಲ್ಲಿ ಗೆದ್ದಾಗ-ಸೋತಾಗ ತಬ್ಬಿಕೊಳ್ಳುವುದು ಸಹಜ. ಹಾಗೆಂದ ಮಾತ್ರಕ್ಕೆ ಅದನ್ನು ಅಪರಾಧ ಎಂದು ಹೇಳಲಾಗದು. ಬ್ರಿಜ್ ಭೂಷಣ್ ಅವರ ವಿಚಾರದಲ್ಲೂ ಇದೇ ನಡೆದಿದ್ದು, ಪುರುಷ ಕೋಷ್ ಆಟಗಾರರನ್ನು ತಬ್ಬಿಕೊಂಡರೆ ತಪ್ಪಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದವನ್ನೂ ಸುಧೀರ್ಘವಾಗಿ ಆಲಿಸಿದ ನ್ಯಾಯಾಲಯವೂ ವಿವಾರಣೆಯನ್ನೂ ಗುರುವಾರ ನಡೆಸುವುದಾಗಿ ತಿಳಿಸಿದೆ.