

ಸುಳ್ಯ: ತಾಲೂಕಿನ ಸಂಪಾಜೆ ಗ್ರಾಮದ ದೊಡ್ಡಡ್ಕ ರಾಜರಾಂಪುರ ಎಂಬಲ್ಲಿ ಮನೆಯ ಸನಿಹ ಬೃಹತ್ ಹೊಂಡ ಉದ್ಭವಿಸಿದ್ದು ಮುಚ್ಚಿದರೂ ಮತ್ತೆ ಬಾಯ್ದೆರೆದುಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ದೊಡ್ಡಡ್ಕ ರಾಜರಾಂಪುರ ಪರಿಶಿಷ್ಟ ಜಾತಿ ಕಾಲನಿಯ ಬಾಲಪ್ಪ ಎಂಬವರ ಮನೆಯ ಸಮೀಪವೇ ಎರಡು ದಿನಗಳ ಹಿಂದೆ ಬೃಹತ್ ಹೊಂಡ ಉಂಟಾಗಿತ್ತು. ವಿಪರೀತ ಮಳೆಯ ಕಾರಣ ಉಂಟಾದ ಈ ಹೊಂಡವನ್ನು ಮಂಗಳವಾರ ಸಂಪಾಜೆ ಗ್ರಾ.ಪಂ ವತಿಯಿಂದ ಮುಚ್ಚಿ ಕುಟುಂಬದ ಆತಂಕವನ್ನು ದೂರ ಮಾಡಲಾಗಿತ್ತು.ಆದರೆ ಬುಧವಾರ ಮತ್ತೆ ಮನೆಯ ಸನಿಹದ ಮತ್ತೊಂದು ಭಾಗದಲ್ಲಿ ಹೊಂಡ ನಿರ್ಮಾಣವಾಗಿದ್ದು ಕುಟುಂಬದ ನಿದ್ದೆಗೆಡಿಸಿದೆ.
ಅಲ್ಲದೆ ಹತ್ತಿರದ ಮನೆಯವರೂ ಇದೀಗ ಆತಂಕದಿಂದಲೇ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಲನಿಯ ನಿವಾಸಿ ಬಾಲಪ್ಪ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿ ಮತ್ತೆ ಹೊಂಡ ಮುಚ್ಚುವ ಕಾರ್ಯದಲ್ಲಿ ಸಂಪಾಜೆ ಗ್ರಾಪಂ ನಿರತವಾಗಿದೆ.