

ಬೆಳಗಾವಿ/ಗದಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ ಜೋರಾಗಿದೆ. ರಾಜ್ಯಾದ್ಯಂತ ಪೊಲೀಸ್ ಇಲಾಖೆಯಿಂದ ಚೆಕ್ಪೋಸ್ಟ್ಗಳು ನಿರ್ಮಾಣವಾಗಿದ್ದು, ಈವರೆಗೂ ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಬೆಳಗಾವಿ, ಗದಗ ಮತ್ತು ಚಿಕ್ಕೋಡಿಯಲ್ಲಿ ಲಕ್ಷಾಂತರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಆ್ಯಕ್ಟೀವ್ ಹೋಂಡಾದಲ್ಲಿ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ 13 ಲಕ್ಷ ರೂಪಾಯಿ ಹಣವನ್ನು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾರ್ಕೆಟ್ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಪೋರ್ಟ್ ರಸ್ತೆಯ ಪಿಂಪಲಕಟ್ಟಾ ಬಳಿ ದಾಳಿ ನಡೆಸಿ ಹಣ ವಶಪಡಿಸಿಕೊಳ್ಳಲಾಗಿದೆ. ಕಪಿಲೇಶ್ವರ ಕಾಲೋನಿ ನಿವಾಸಿ ಮಂಗಲ್‌ಬೈ ಪ್ರಜಾಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ರಾತ್ರೋರಾತ್ರಿ ದಾಖಲೆ ಇಲ್ಲದ 4.43 ಲಕ್ಷ ರೂ. ಹಣ ಸೀಜ್ ಮಾಡಲಾಗಿದೆ. ಗದಗ ನಗರದ ಹೊರವಲಯದ ದಂಡಿನ್ ದುರ್ಗಮ್ಮ ದೇವಸ್ಥಾನ ಬಳಿಯ ಚೆಕ್ ಪೋಸ್ಟ್ನಲ್ಲಿ ಹಣ ವಶಕ್ಕೆ ಪಡೆಯಲಾಗಿದೆ. ಗಜೇಂದ್ರಗಢ ಪಟ್ಟಣದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕಾರಿನಲ್ಲಿ ಹಣ ಸಾಗಿಸುವಾಗ ಜಪ್ತಿ ಮಾಡಿದ್ದಾರೆ.
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 9.35 ಲಕ್ಷ ರೂ ಹಣವನ್ನು ಬೆಳಗಾವಿ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ಗಳಲ್ಲಿ ಹಣ ಸೀಜ್ ಮಾಡಿದ್ದಾರೆ. ಹುಕ್ಕೇರಿ ತಾಲೂಕಿನ ಬುಗಟೆ ಆಲೂರು ಚೆಕ್ ಪೋಸ್ಟ್ನಲ್ಲಿ 1.9 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ರಾಯಬಾಗ ತಾಲೂಕಿನ ಹಾರೂಗೇರಿ ಚೆಕ್ ಪೋಸ್ಟ್ನಲ್ಲಿ 4 ಲಕ್ಷ ರೂ. ಹಾಗೂ ಅಥಣಿ ತಾಲೂಕಿನಲ್ಲಿ 3.45 ಲಕ್ಷ ರೂ. ಅನ್ನು ವಶಕ್ಕೆ ಪಡೆಯಲಾಗಿದೆ. (ದಿಗ್ವಿಜಯ ನ್ಯೂಸ್)