ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್ ಪೆರ್ರಿ ಅಲಿಯಾಸ್ ನಿಕೊಕಾಡೊ ಅವಕಾಡೊ, ಆಹಾರವನ್ನು ಗಬಗಬನೇ ತಿನ್ನುವ ವಿಡಿಯೋಗಳ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ಸಬ್ಸ್ಕ್ರೈಬ್ಗಳನ್ನು ಹೊಂದಿದ್ದಾರೆ.
ಕಾಲಕಾಲಕ್ಕೆ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿನ್ನುವ ವಿಡಿಯೋಗಳನ್ನು ನಿಕೋಲಾಸ್ ಹಂಚಿಕೊಳ್ಳುತ್ತಾರೆ. ಅತಿಯಾಗಿ ತಿನ್ನುವುದರಿಂದ ನಿಕೋಲಸ್ ಪೆರ್ರಿ ಸ್ಥೂಲಕಾಯಕ್ಕೂ ತುತ್ತಾಗಿದ್ದರು. ಕೊನೆಯ ವಿಡಿಯೋವನ್ನು ಏಳು ತಿಂಗಳ ಹಿಂದೆ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಗಳಿಸಿದೆ.
ಹಲವು ತಿಂಗಳುಗಳ ಬಳಿಕ ಇತ್ತೀಚೆಗಷ್ಟೇ ನಿಕೋಲಾಸ್ ಪೆರ್ರಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದನ್ನು ನೋಡಿ ಪ್ರೇಕ್ಷಕರು ಅಕ್ಷರಶಃ ಶಾಕ್ ಆಗಿದ್ದಾರೆ. ಏಕೆಂದರೆ, ದಡೂತಿ ದೇಹವನ್ನು ಕರಗಿಸಿ ನಿಕೋಲಸ್ ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ. ನಿಕೋಲಸ್ ಬರೋಬ್ಬರಿ 114 ಕೆಜಿ ಇಳಿಸಿದ್ದಾರೆ.
ಅಂದಹಾಗೆ ಪ್ರತಿಯೊಬ್ಬರಿಗೂ ತೂಕ ಇಳಿಸಿಕೊಳ್ಳಲು ವರ್ಷಗಳೇ ಬೇಕು. ಇದೇ ಸಂದರ್ಭದಲ್ಲಿ ಕೇವಲ ಏಳು ತಿಂಗಳಲ್ಲಿ 114 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ನಿಕೋಲಸ್ ಅವರೇ ಉತ್ತರ ನೀಡಿದ್ದಾರೆ. ಇದು ಕೆಲವೇ ತಿಂಗಳುಗಳ ಶ್ರಮವಲ್ಲ, ಕಳೆದ ಎರಡು ವರ್ಷಗಳಿಂದ ಊಟದ ಮೇಲೆ ತುಂಬಾ ನಿರ್ಬಂಧ ಹೇರಿದ್ದೆ. ಎರಡು ವರ್ಷಗಳ ಹಿಂದೆಯೇ ಆಹಾರ ಸೇವಿಸುವ ಎಲ್ಲ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೆವು. ಆನಂತರ ಒಂದೊಂದಾಗಿ ಪೋಸ್ಟ್ ಮಾಡಲಾಗಿದೆ ಎಂದು ನಿಕೋಲಸ್ ಹೇಳಿದ್ದಾರೆ.
ಹೆಚ್ಚು ಆಹಾರವನ್ನು ಸೇವಿಸುವುದಕ್ಕಿಂತ ಆರೋಗ್ಯಕರ ಆಹಾರಕ್ಕೆ ಒತ್ತು ನೀಡಲಾಗುತ್ತದೆ ಎಂದಿರುವ ನಿಕೋಲಸ್, ತನ್ನ ತೂಕ ಇಳಿಸುವ ಪ್ರಯಾಣದ ಸಮಯದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಸದ್ಯ ಪೋಸ್ಟ್ ಮಾಡಿರುವ ವಿಡಿಯೋ ಈವರೆಗೆ 33 ಮಿಲಿಯನ್ ವೀಕ್ಷಣೆ ಕಂಡಿದೆ. (ಏಜೆನ್ಸೀಸ್)
ತನ್ನ ವಿಚಿತ್ರ ಸಂಭ್ರಮಾಚರಣೆಯಿಂದ ಅಂದು ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ಬಾಲಕ ಇಂದು ಹೇಗಿದ್ದಾನೆ ನೋಡಿ!
ರೇಣುಕಸ್ವಾಮಿಯಿಂದ ನಂಗ್ಯಾವ ಮೆಸೇಜ್ ಬಂದಿಲ್ಲ, ಬಂದಿದ್ರೂ ನಾನು ಅದನ್ನ ಓದಲ್ಲ: ರಾಗಿಣಿ ದ್ವಿವೇದಿ