

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಬಂಧನವಾಗಿರುವುದು ಇಡೀ ರಾಜ್ಯಕ್ಕೆ ತಿಳಿದಿದೆ. ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಪ್ರಕರಣದಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿಯಾಗಿದ್ದಾರೆ. ಇಡೀ ಪ್ರಕರಣಕ್ಕೆ ಮೂಲ ಕಾರಣ ಪವಿತ್ರಾ ಗೌಡ.
ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಅಲ್ಲದೆ, ಒಳಸಂಚು ನಡೆಸಿದ ಆರೋಪದ ಮೇಲೆ ಪವಿತ್ರಾ ಗೌಡಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಸದ್ಯ ಇಬ್ಬರು ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರ ಕಸ್ಟಡಿಯಲ್ಲಿದ್ದಾರೆ.
ನಿನ್ನೆ (ಜೂನ್ 13) ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಸಹ ಮಾಡಲಾಗಿದೆ. ಸದ್ಯ ಜೈಲಿನಲ್ಲಿರುವ ಪವಿತ್ರಾ ಗೌಡ ಕಣ್ಣೀರು ಹಾಕುತ್ತಿದ್ದಾರಂತೆ. ತಾನು ಮಾಡಿದ ಕೃತ್ಯವನ್ನು ನೆನೆದು ಪಶ್ಚಾತಾಪ ಪಡುತ್ತಿದ್ದಾರಂತೆ. ಮತ್ತಷ್ಟು ದಿನ ತಮ್ಮ ಕಸ್ಟಡಿಗೆ ನೀಡುವಂತೆ ಅವರು ಕೇಳಬಹುದು. ಈ ಮಧ್ಯೆ ಪವಿತ್ರಾ ಗೌಡ ಅವರು ಜೈಲಿನಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಅವರು ಘಟನೆ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ ಎನ್ನಲಾಗಿದೆ.
ರೇಣುಕಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದ ವಿಚಾರ ದರ್ಶನ್ಗೆ ಗೊತ್ತಾಗಲೇಬಾರದಿತ್ತು. ನಾನೇ ಸೈಬರ್ ಕ್ರೈಂಗೆ ದೂರು ನೀಡಿ ಎಲ್ಲವನ್ನು ಸರಿ ಮಾಡಿಕೊಳ್ಳಬೇಕಿತ್ತು. ಈ ವಿಚಾರ ದರ್ಶನ್ಗೆ ಗೊತ್ತಾಗಿದ್ದರಿಂದಲೇ ಇಷ್ಟೆಲ್ಲ ಅನಾಹುತ ನಡೆದುಬಿಟ್ಟಿದೆ ಎಂದು ಪವಿತ್ರಾ ಗೌಡ ನೋವಿನಿಂದ ಕೊರಗುತ್ತಿದ್ದಾರಂತೆ. ನಾನು ಹೇಳದೇ ಹೋಗಿದ್ದರೆ, ಎಲ್ಲರು ಆರಾಮಾಗಿ ಇರಬಹುದಿತ್ತು. ಕೊಲೆ ನಡೆಯುತ್ತಿರಲೇ ಇಲ್ಲ. ಯಾರೂ ಕೂಡ ಜೈಲು ಪಾಲಾಗುತ್ತಿರಲಿಲ್ಲ ಎಂದು ಕೊರಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.
ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.