'ಮಸ್ಕ್​' ಟೆಸ್ಲಾಗೆ 'ಮಸ್ತ್​' ಬೇಡಿಕೆ!? ಇಲ್ಲಿಯವರೆಗೆ ಭಾರತದಲ್ಲಿ ಎಷ್ಟು ಕಾರುಗಳ ಆರ್ಡರ್​​​? ಹೀಗಿದೆ ವರದಿ | Tesla Cars

ವಿಜಯವಾಣಿ (20)
Published on

Tesla Cars: ಭಾರತಕ್ಕೆ ಎಲೋನ್​ ಮಸ್ಕ್​ ಮಾಲೀಕತ್ವದ ಟೆಸ್ಲಾ ಕಾರುಗಳ ಆಗಮನ ಈಗಾಗಲೇ ಅಧಿಕೃತವಾಗಿದೆ. ಈ ವಿಷಯ ಬಹುತೇಕರಿಗೆ ತಿಳಿದಿರುವ ಸಂಗತಿಯೇ. ಶೀಘ್ರವೇ ಭಾರತದಲ್ಲಿ ಮಸ್ಕ್​ ಅವರ ಟೆಸ್ಲಾ ಕಾರುಗಳನ್ನು ಭಾರತಕ್ಕೆ ತರುವ ಯೋಚನೆಯನ್ನು ಪ್ರಧಾನಿ ಮೋದಿ, ಆರು ತಿಂಗಳ ಹಿಂದೆಯಷ್ಟೇ ಟ್ರಂಪ್​ ಅವರೊಂದಿಗೆ ಪ್ರಸ್ತಾಪಿಸಿದ್ದರು. ಅಂತೆಯೇ ಇದೀಗ ಮಸ್ಕ್​ ಸಂಸ್ಥೆಯ ಕಾರು ಭಾರತದ ಮುಂಬೈಗೆ ಲಗ್ಗೆಯಿಟ್ಟಿದೆ. ಈ ಕಾರುಗಳಿಗೆ ನಿರೀಕ್ಷೆಗೂ ಮೀರಿದ ಬುಕ್ಕಿಂಗ್​ಗಳು ಬಂದಿವೆಯೇ? ಇಲ್ಲಿಯವರೆಗೆ ಎಷ್ಟು ಆರ್ಡರ್​ಗಳು ಲಭಿಸಿವೆ ಎಂಬುದರ ವಿವರ ಇಲ್ಲಿದೆ ನೋಡಿ.

600ಕ್ಕೂ ಹೆಚ್ಚು

ಈ ವರ್ಷದ ಜುಲೈ ಮಧ್ಯಂತರದಲ್ಲಿ ಭಾರತಕ್ಕೆ ಎಂಟ್ರಿಕೊಟ್ಟ ಟೆಸ್ಲಾ ಸಂಸ್ಥೆ, ಇಲ್ಲಿಯವರೆಗೆ 600ಕ್ಕೂ ಹೆಚ್ಚು ಆರ್ಡರ್​ಗಳನ್ನು ಸ್ವೀಕರಿಸಿದೆ. ಈ ಸಂಖ್ಯೆಯು ಕಂಪನಿಯ ನಿರೀಕ್ಷೆಗಳನ್ನು ತಲುಪಿಲ್ಲ ಎಂದು 'ಬ್ಲೂಮ್‌ಬರ್ಗ್ ವರದಿ' ಉಲ್ಲೇಖಿಸಿದೆ. ಎಲಾನ್ ಮಸ್ಕ್ ನೇತೃತ್ವದ ಇವಿ ತಯಾರಕ ಕಂಪನಿಯು ಈ ವರ್ಷವೇ 350ರಿಂದ 500 ಕಾರುಗಳನ್ನು ಭಾರತಕ್ಕೆ ಕಳುಹಿಸಲು ಯೋಜಿಸಿದೆ ಎನ್ನಲಾಗಿದೆ. ಅದರಲ್ಲಿ ಮೊದಲ ಬ್ಯಾಚ್, ಇದೇ ಸೆಪ್ಟೆಂಬರ್ ಆರಂಭದಲ್ಲಿ ಶಾಂಘೈನಿಂದ ಬಂದಿಳಿಯಲಿದೆ ಎಂದು ವರದಿ ಹೇಳಿದೆ.

ಈ ಕಾರುಗಳ ವಿತರಣೆಗಳು ಆರಂಭದಲ್ಲಿ ಮುಂಬೈ, ದೆಹಲಿ, ಪುಣೆ ಮತ್ತು ಗುರುಗ್ರಾಮ್‌ಗೆ ಮಾತ್ರ ಸೀಮಿತವಾಗಿರಲಿದೆ. ಜುಲೈನಲ್ಲಿ, ಟೆಸ್ಲಾ ತನ್ನ ಮಾಡೆಲ್ ವೈ ಮಾಡೆಲ್​ ಕಾರನ್ನು ಭಾರತದಲ್ಲಿ ಪರಿಚಯಿಸಿದ್ದು, ಅದರ ಮಾರುಕಟ್ಟೆ ಬೆಲೆಯು 70,000 ಡಾಲರ್​ ಎಂದು ತಿಳಿಸಿತು. ಇದು ಆಮದು ಮಾಡಿಕೊಂಡ ಇವಿಗಳ ಮೇಲಿನ ದೇಶದ ಹೆಚ್ಚಿನ ಸುಂಕಗಳನ್ನು ಪ್ರತಿಬಿಂಬಿಸುವ ಬೆಲೆಯಾಗಿದೆ ಎಂಬುದು ಗಮನಾರ್ಹ.

ಭಾರತದಲ್ಲಿ ಲಭ್ಯತೆ, ಬೆಲೆ ಎಷ್ಟು?

ಟೆಸ್ಲಾ ಮಾಡೆಲ್ ವೈ ರಿಯರ್-ವೀಲ್ ಡ್ರೈವ್ (RWD) ರೂಪಾಂತರವು ದೇಶೀಯ ಮಾರುಕಟ್ಟೆಯಲ್ಲಿ 59.89 ಲಕ್ಷ ರೂ. (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದೀರ್ಘ-ಶ್ರೇಣಿಯ RWD ಮಾದರಿಯು 67.89 ಲಕ್ಷ ರೂ.ನಿಂದ (ಎಕ್ಸ್-ಶೋ ರೂಂ) ಪ್ರಾರಂಭವಾಗುತ್ತದೆ. ಕಾರಿನ ಬೆಲೆ ಹೊರತುಪಡಿಸಿ, ಇತರ ಬಣ್ಣ ಆಯ್ಕೆಗಳ ಶುಲ್ಕಗಳು 95,000ರಿಂದ 1.85 ಲಕ್ಷದವರೆಗೆ ಇರಲಿದೆ.

ಸಂಸ್ಥೆಯ ಪ್ರಕಾರ, ಟೆಸ್ಲಾ ಮಾಡೆಲ್ Y ಸಂಪೂರ್ಣ ಸ್ವಯಂ-ಚಾಲನಾ ಸಾಮರ್ಥ್ಯಗಳನ್ನು (FSD) ಅನ್‌ಲಾಕ್ ಮಾಡಲು 6 ಲಕ್ಷ ರೂ. ವೆಚ್ಚವಾಗುತ್ತದೆ. ಇದರಲ್ಲಿ ನ್ಯಾವಿಗೇಟ್ ಆನ್ ಆಟೋಪೈಲಟ್, ಆಟೋಪಾರ್ಕ್, ಸಮ್ಮನ್, ಟ್ರಾಫಿಕ್ ಮತ್ತು ಸ್ಟಾಪ್ ಸೈನ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ. ಹೊಸ ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC)ನಲ್ಲಿರುವ ಮೇಕರ್ ಮ್ಯಾಕ್ಸ್‌ಸಿಟಿಯಲ್ಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net