ಪಹಲ್ಗಾಮ್​ ದಾಳಿ ಹೇಗೆ ನಡೆಯಿತು? ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ವಯನಾಡು ಸಂಸದೆ! Priyanka Vadra

Priyanka Gandhi Vadra
Published on

Priyanka Vadra: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಹೇಗೆ ನಡೆಯಿತು ಎಂಬುದನ್ನು ಕೇಂದ್ರ ಸರ್ಕಾರ ಏಕೆ ವಿವರಿಸಲಿಲ್ಲ ಎಂದು ಕೇರಳದ ವಯನಾಡು ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ (ಜುಲೈ 29) ಪ್ರಶ್ನಿಸಿದ್ದಾರೆ.

ಮಂಗಳವಾರ ಸಂಸತ್ತಿನಲ್ಲಿ ನೆಡದ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ, ನಾನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸರ್ಕಾರದ ಹಲವಾರು ಕೇಂದ್ರ ಸಚಿವರ ಭಾಷಣಗಳನ್ನು ಕೇಳಿದೆ. ಆಪರೇಷನ್ ಸಿಂಧೂರ, ಭಯೋತ್ಪಾದನೆ ಹಾಗೂ ರಾಷ್ಟ್ರೀಯ ಭದ್ರತೆ ಸೇರಿದಂತೆ ಎಲ್ಲದರ ಬಗ್ಗೆ ಮಾತನಾಡಿದರು ಮತ್ತು ಇತಿಹಾಸದ ಪಾಠವನ್ನೂ ನೀಡಿದರು. ಆದರೆ, ಒಂದು ವಿಷಯ ಕಾಣೆಯಾಗಿತ್ತು. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿ ನಿಖರವಾಗಿ ಹೇಗೆ ಸಂಭವಿಸಿತು? ಎನ್ನುವುದರ ಬಗ್ಗೆ ಸರ್ಕಾರ ಉತ್ತರಿಸಲಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ, ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಿದೆ ಮತ್ತು ಸಂಪೂರ್ಣ ಶಾಂತಿ ನೆಲೆಸಿದೆ ಎಂದು ಹೇಳುತ್ತಾ ಕೆಲವು ಸಮಯದಿಂದ ಕೇಂದ್ರ ಸರ್ಕಾರ ಪ್ರಚಾರದಲ್ಲಿ ನಿರತವಾಗಿದೆ ಎಂದು ಪ್ರಿಯಾಂಕಾ ಅವರು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರು ಕೂಡ ಹಲವಾರು ಭಾಷಣಗಳನ್ನು ಮಾಡಿ, ನಾಗರಿಕರನ್ನು ಕಾಶ್ಮೀರಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು. ಈ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷಿತ ವಾತಾವರಣವಿದೆ ಎಂದು ಹೇಳಿಕೊಂಡು ಅಲ್ಲಿ ಭೂಮಿ ಖರೀದಿಸುವಂತೆ ಜನರನ್ನು ಪ್ರೇರೇಪಿಸುವುದನ್ನು ನಾನು ಆಗಾಗ್ಗೆ ನೋಡಿದ್ದೇನೆ ಎಂದು ಸಂಸದೆ ಪ್ರಿಯಾಂಕಾ ವಾದ್ರಾ ಟೀಕಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net