ದಾವಣಗೆರೆಗೆ COVID19 ವಕ್ಕರಿಸಿದ್ಹೇಗೆ?

corona virus
Published on

ದಾವಣಗೆರೆ: ದಾವಣಗೆರೆಗೆ ಕರೊನಾ ಮಹಾಮಾರಿ ವಕ್ಕರಿಸಿದ್ದು ಹೇಗೆ? ಈ ಗೊಂದಲಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಇದೇ ರೀತಿ ಆಗಿದೆ ಎಂದು ಹೇಳುವ ಸ್ಥಿತಿಯಲ್ಲಿ ಜಿಲ್ಲಾಡಳಿತವೂ ಇಲ್ಲ, ಎಲ್ಲವೂ ಗೋಜಲು ಗೋಜಲಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಅವರು ಹೇಳಿದ ಧಾಟಿ ಕೂಡ ಇದೇ ಆಗಿತ್ತು.

ಇದೊಂದು ಆಕಸ್ಮಿಕ. ವೈರಸ್ ಹೇಗೆ ಹಬ್ಬಿತು ಎಂಬುದು ತಿಳಿಯುತ್ತಿಲ್ಲ. ಸೋಂಕು ತಗುಲಿಸಿದವರು ಯಾರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು. ಈರುಳ್ಳಿ ವ್ಯಾಪಾರಿ ಬಾಗಲಕೋಟೆಯಿಂದ ಬಂದು ವ್ಯಾಪಾರ ಮಾಡುವಾಗ ಸೋಂಕು ತಗುಲಿದೆ ಎಂದು ಜಿಲ್ಲೆಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಇನ್ನೂ 4 ಜನರ ಮಾದರಿಗಳ ಪರೀಕ್ಷಾ ಫಲಿತಾಂಶ ಒಂದೆರಡು ದಿನಗಳಲ್ಲಿ ಬರಲಿದ್ದು, ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ.

12 ಹೊಸ ಸೋಂಕು: ದಾವಣಗೆರೆಯಲ್ಲಿ ಕರೊನಾ ಕೇಕೆ ಹಾಕುತ್ತಿದೆ. ಮಂಗಳವಾರ ಒಂದೇ ದಿನ 12 ಹೊಸ ಸೋಂಕಿತರು ಪತ್ತೆಯಾಗಿದ್ದು, ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಹಾಗೂ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದ್ದು ಆತಂಕ ಸೃಷ್ಟಿಸಿದೆ. ಕಂಟೈನ್​ವೆುಂಟ್ ಪ್ರದೇಶಗಳ ಸಂಖ್ಯೆ ಕೂಡ 4 ರಿಂದ 5ಕ್ಕೆ ಏರಿಕೆಯಾಗಿದೆ. ಕೆಟಿಜೆ ನಗರವನ್ನು ಹೊಸ ಕಂಟೈನ್​ವೆುಂಟ್ ಪ್ರದೇಶವೆಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net