ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಬಿರುಸುಗೊಂಡಿದ್ದು, ನದಿ ಪ್ರದೇಶಗಳು ತುಂಬಿದ್ದು ಹಲವು ಮನೆಗಳು ಜಲಾವೃತವಾಗಿ ಜನ ಸಂಕಷ್ಟ ಅನುಭವಿಸಿದರು. ತಹಸೀಲ್ದಾರ್ ಪ್ರತಿಭಾ ಆರ್ ನೇತೃತ್ವದ ರಕ್ಷಣಾ ತಂಡ ಸ್ಥಳೀಯಾಡಳಿತ ಜತೆ ಸೇರಿ ಜನರನ್ನು ಸ್ಥಳಾಂತರಿಸಿದ್ದಾರೆ.
ಪಲಿಮಾರು ಶಾಂಭವಿ, ಉದ್ಯಾವರ ಪಾಪನಾಶಿನಿ, ಪಾಂಗಾಳ ಪಿನಾಕಿನಿ ನದಿಗಳು ತುಂಬಿದ್ದು, ಈ ವ್ಯಾಪ್ತಿಯ ತಗ್ಗುಪ್ರದೇಶ ಜಲಾವೃತವಾಗಿವೆ. ಬುಧವಾರ ಬೆಳಗ್ಗಿನಿಂದ ವಿಪರೀತ ಮಳೆಯಾಗಿದ್ದು, ಸಂಜೆ ವೇಳೆ ಕೆಲ ಪ್ರದೇಶಗಳಲ್ಲಿ ಸೂಕ್ತ ಚರಂಡಿಗಳಿಲ್ಲದೆ ರಸ್ತೆ ನೀರಿನಿಂದ ಮುಳುಗಡೆಯಾಗಿ ವಾಹನ ಸವಾರರು ಸಂಕಷ್ಟ ಅನುಭವಿಸಿದ್ದರು. ಪಲಿಮಾರು ಗ್ರಾಮದ ಮೂಡು ಪಲಿಮಾರು ಶಾಂಭವಿ ಅಣೆಕಟ್ಟು ಪ್ರದೇಶದಲ್ಲಿ 10 ಮನೆಗಳು ಜಲಾವೃತವಾಗಿದ್ದು, ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ ನೇತೃತ್ವದಲ್ಲಿ ಗ್ರಾಪಂ ಸದಸ್ಯರು, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಸಂಬಂಧಿಕರ ಮನೆಯಲ್ಲಿ ಆಶ್ರಯ
ಕೊಪ್ಪಳದಲ್ಲಿ ಗೋಪಾಲ ಎಂಬುವರ ಮನೆ ಐದು ಸದಸ್ಯರು, ಕಟಪಾಡಿ ಯೇಣಗುಡ್ಡೆ ಾರೆಸ್ಟ್‌ಗೇಟ್ ಬಳಿಯ ನಾಗಿ ಕುಟುಂಬದ ಐವರು, ಪಂಜಿಮಾರು ಪ್ರದೇಶದ ಹಿಲ್ಡಾ ರೋಡ್ರಿಗಸ್ ಕುಟುಂಬದ ಇಬ್ಬರು, ಶಿರ್ವದ ಮಾರಿಗುಡಿ ಸೇತುವೆ ಬಳಿಯ ಜಶ್ರೀ ಕುಟುಂಬದ ಮೂವರು, ಬೆಳ್ಳೆ ಗ್ರಾಮದ ಪಡುಬೆಳ್ಳೆಯ ತುಕ್ರ ಮುಖಾರಿ ಕುಟುಂಬದ 9 ಮಂದಿ ಸದಸ್ಯರನ್ನು ತಹಸೀಲ್ದಾರ್ ಪ್ರತಿಭಾ ಆರ್. ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು. ತಾಲೂಕಿನೆಲ್ಲೆಡೆ ಕಾಳಜಿ ಕೇಂದ್ರಗಳನ್ನು ತೆರೆದಿದ್ದರೂ ಯಾರೂ ಅಲ್ಲಿಗೆ ಬರಲೊಪ್ಪದೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಂದಾಯ ನಿರೀಕ್ಷಕ ಇಜ್ಜಾದ್ ಶಾಬೀರ್, ಗ್ರಾಮಾಡಳಿತಾಧಿಕಾರಿ ಪ್ರದೀಪ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗ್ಳೆ, ಗ್ರಾಪಂ ಸದಸ್ಯರು ಸಹಕರಿಸಿದರು.