ಮರ ಬಿದ್ದು ಮನೆ ಮಂದಿಗೆ ಗಾಯ : ಹರಿಹರ ಪಲ್ಲತ್ತಡ್ಕದಲ್ಲಿ ಮೂರು ಮನೆಗಳ ಮೇಲೆ ಎರಗಿದ ವೃಕ್ಷ

house
ಹರಿಹರ ಪಲ್ಲತ್ತಡ್ಕ ಗ್ರಾಮದ ಪಲ್ಲತ್ತಡ್ಕ ಕಾಲನಿಯಲ್ಲಿರುವ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ.
Published on

ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕ ಗ್ರಾಮದ ಪಲ್ಲತ್ತಡ್ಕ ಕಾಲನಿಯಲ್ಲಿರುವ ಮೂರು ಮನೆಗಳ ಮೇಲೆ ಬುಧವಾರ ತಡರಾತ್ರಿ ಮರ ಬಿದ್ದು ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಮನೆಯೊಳಗಿದ್ದವರು ಗಾಯಗೊಂಡಿದ್ದಾರೆ. ಒಂದು ಮನೆ ಭಾಗಶಃ ಹಾನಿಗೊಂಡಿದೆ.

ಬುಧವಾರ ರಾತ್ರಿ 12 ಗಂಟೆ ಹೊತ್ತಿಗೆ ಮನೆ ಮಂದಿ ನಿದ್ರೆಯಲ್ಲಿದ್ದ ಸಂದರ್ಭ ಮನೆಯ ಪಕ್ಕದಲ್ಲೇ ಇದ್ದ ಮರ ಮನೆ ಮೇಲೆ ಬಿದ್ದಿದೆ. ಪರಿಣಾಮವಾಗಿ ಐತೆ, ರವಿ, ಮಾಲತಿಯವರು ವಾಸವಿರುವ ಮನೆಯ ಛಾವಣಿ ಮತ್ತು ಗೋಡೆ ಸಂಪೂರ್ಣ ಧರಾಶಾಯಿಯಾಯಿತು. ಮನೆಯೊಳಗೆ ಮಲಗಿದ್ದ ಐತೆ, ರವಿ, ಮಾಲತಿ, ಮಕ್ಕಳಾದ ಆದರ್ಶ ಮತ್ತು ಯಕ್ಷಿತಾರವರಿಗೆ ಗಾಯಗಳಾಗಿವೆ. ವಿಷಯ ತಿಳಿದು ಸೇರಿದ ಜನ ರಾತ್ರಿಯೇ ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಮಗುವಿಗೆ ಗಾಯವಾಗಿದೆ. ಐತೆ ಅವರ ಮನೆಗೆ ಬಂದಿದ್ದ ಬಂಧು ಶೇಖರ ಎಂಬುವರಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿದು ಬಂದಿದೆ.

ಹತ್ತಿರದಲ್ಲಿ ಸಂಜೀವ ಎಂಬುವರ ಮನೆಯಿದ್ದು ಅವರ ಮನೆಯ ಮೇಲೂ ಈ ಮರದ ರೆಂಬೆಗಳು ಬಿದ್ದಿವೆ. ಅದು ತಾರಸಿ ಮನೆಯಾದ ಕಾರಣ ಮೇಲ್ಛಾವಣಿಗೆ ಹಾನಿಯಾಗಿಲ್ಲ. ಆದರೆ ಮನೆಯ ಎದುರುಗಡೆ ಸಿಟೌಟ್‌ಗೆ ಹಾಕಲಾಗಿದ್ದ ಶೀಟ್‌ಗಳು ಪುಡಿಯಾಗಿವೆ. ಸಂಜೀವರವರ ಬೈಕ್ ಜಖಂಗೊಂಡಿದೆ. ಐತೆಯವರ ಹತ್ತಿರದ ಸಂಬಂಧಿಕರಿದ್ದ ಇನ್ನೊಂದು ಮನೆ ಕೂಡ ಸಂಪೂರ್ಣ ಹಾನಿಗೊಳಗಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net