

ಕಡಬ: ಕಟ್ಟಡ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಡೆದ ಘಟನೆಗೆ ಸಂಬಂಧಿಸಿ ಮಹಿಳೆಯೊಬ್ಬರು ಮಾನಭಂಗ ಯತ್ನ ದೂರು ದಾಖಲಿಸಿದರೆ, ಮತ್ತೋರ್ವರು ಹಲ್ಲೆ ದೂರು ನೀಡಿದ್ದಾರೆ.ಇತ್ತಂಡಗಳ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
102 ನೆಕ್ಕಿಲಾಡಿ ಗ್ರಾಮದ ಪುಯಿಲದ ಅಜೀಶ್ ಎಂಬುವರು ನೀಡಿದ ದೂರಿನಲ್ಲಿ, ಐತ್ತೂರು ಗ್ರಾಮದ ಕಪ್ಪೆ ಹಳ್ಳದ ಜಾಗದ ಬದಿಯಲ್ಲಿರುವ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆಯಿದ್ದು, ಹಾಗಿದ್ದರೂ ನಾಲ್ಕು ಜನರನ್ನು ಕೆಲಸಕ್ಕಿಟ್ಟು ಅಕ್ರಮವಾಗಿ ಕೆಲಸ ಮಾಡುತ್ತಿದ್ದು ಇದನ್ನು ವಿಡಿಯೋ ಚಿತ್ರೀಕರಣ ಮಾಡಲು ಮುಂದಾದ ವೇಳೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದಲ್ಲದೆ ಬೆತ್ತದ ಕೋಲಿನಲ್ಲಿ ಹಲ್ಲೆ ಮಾಡಿರುವುದಾಗಿ ಆರೋಪಿಸಿ ಮಹಿಳೆ ಮತ್ತು ಆಕೆಯ ಪತಿ ಬಾಬು ಅವರ ವಿರುದ್ಧ ದೂರು ನೀಡಿದ್ದಾರೆ.
ಪ್ರತಿ ದೂರು ನೀಡಿರುವ ಐತ್ತೂರು ಗ್ರಾಮದ ಕೆರ್ಮಾಯಿಯ ಮಹಿಳೆ, ಕಪ್ಪೆ ಪಲ್ಲ(ಕೆರ್ಮಾಯಿ) ಎಂಬಲ್ಲಿಯ ಜಾಗದಲ್ಲಿ ಮನೆಯ ಕೆಲಸ ಮಾಡುತ್ತಿರುವಾಗ ಸ್ಥಳಕ್ಕಾಗಮಿಸಿದ ಅಜೀಶ್‌ಎಂಬುವವರು ದೊಣ್ಣೆಯಿಂದ ಹೊಡೆದು, ಮಾನಭಂಗಕ್ಕೆ ಯತ್ನಿಸಿರುವುದಾಗಿ ದೂರು ನೀಡಿದ್ದಾರೆ.