ಪುತ್ರನೊಂದಿಗಿದ್ದ ಮಹಿಳೆಯ ಗುಡಿಸಲಿಗೆ ಬೆಂಕಿ : ನಗದು, ದಿನಸಿ ಸಾಮಗ್ರಿ, ದಾಖಲೆಪತ್ರಗಳು ಬೆಂಕಿಗಾಹುತಿ : ದುಷ್ಕರ್ಮಿಗಳು ಹಚ್ಚಿರುವ ಶಂಕೆ

benki
Published on

ಪುತ್ತೂರು ಗ್ರಾಮಾಂತರ: ಪತಿ ನಿಧನರಾದ ಬಳಿಕ ಮಹಿಳೆಯೊಬ್ಬರು ತಮ್ಮ ಎಳೆಯ ಮಗನೊಂದಿಗೆ ಗುಡಿಸಲೊಂದರಲ್ಲಿ ವಾಸ ಮಾಡುತ್ತಿದ್ದರು. ಸೋರುತ್ತಿರುವ ಮಾಡು, ಶಿಥಿಲ ಗೋಡೆ ಮಧ್ಯೆ ಕಷ್ಟಪಟ್ಟು ಬದುಕುತ್ತಿದ್ದರು. ಆದರೆ ಇದ್ದ ಆ ಸೂರಿಗೆ ಬೆಂಕಿ ಬಿದ್ದಿದೆ. ಬೆಂಕಿಯ ಜತೆ ಬದುಕೂ ಕರಟಿದೆ.

ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಪದ್ಮಾವತಿ ಹಾಗೂ ಅವರ ಎಳೆಯ ಪುತ್ರ ವಾಸ್ತವ್ಯವಿದ್ದ ಶೀಟ್ ಅಳವಡಿಸಿರುವ ಗುಡಿಸಲು ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಮನೆಯೊಳಗೆ ಬ್ಯಾಗ್‌ವೊಂದರಲ್ಲಿ ಇರಿಸಲಾಗಿದ್ದ ರೂ.15 ಸಾವಿರ ನಗದು ಹಣ, ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳು, ದಿನಸಿ ಸಾಮಗ್ರಿಗಳು ಹಾಗೂ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಗೋಡೆ ಇಲ್ಲದ ಗುಡಿಸಲಿನ ಸುತ್ತ ಅಳವಡಿಸಲಾಗಿದ್ದ ನೆಟ್ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಶುಕ್ರವಾರ ನಡೆದಿದ್ದು ಗುಡಿಸಲಿಗೆ ಯಾರೋ ಬೆಂಕಿ ಹಚ್ಚಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪದ್ಮಾವತಿ ಅವರ ಪತಿ ನಿಧನ ಹೊಂದಿದ ಬಳಿಕ ಅವರು ತನ್ನ 8 ವರ್ಷದ ಪುತ್ರನೊಂದಿಗೆ ಈ ಗುಡಿಸಲಿನಲ್ಲಿ ವಾಸ್ತವ್ಯವಿದ್ದರು. ಪದ್ಮಾವತಿ ಎಂದಿನಂತೆ ಕೆಲಸಕ್ಕೆ ಹೋಗಿದ್ದ ವೇಳೆ ಸ್ಥಳೀಯರು ಕರೆಮಾಡಿ ಮನೆಗೆ ಬೆಂಕಿ ಬಿದ್ದಿರುವ ವಿಚಾರ ತಿಳಿಸಿದ್ದರು. ಕೂಡಲೇ ಅವರು ಮನೆಗೆ ಬಂದಿದ್ದರೂ ಆ ವೇಳೆಗಾಗಲೇ ಗುಡಿಸಲಿನ ಒಂದು ಭಾಗ ಬೆಂಕಿಗೆ ಸಂಪೂರ್ಣ ಆಹುತಿಯಾಗಿತ್ತು.

ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ, ಎಸ್ಕೆಎಸ್ಸೆಸ್ಸೆಫ್ ಮುಖಂಡ ಅಶ್ರಫ್ ಸಾರೆಪುಣಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಸ್ಥಳೀಯರಾದ ಹುಕ್ರ ಎಂಬುವರು ಬೆಂಕಿ ನಂದಿಸಲು ಸಹಕಾರ ನೀಡಿದ್ದರು. ಘಟನಾ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಸುತ್ತ ಅನುಮಾನ..?

ಪದ್ಮಾವತಿ ಅವರ ಮನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲ. ಹಾಗಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಲು ಸಾಧ್ಯವಿಲ್ಲ. ಮನೆಯ ಒಲೆ ಒಂದು ಮೂಲೆಯಲ್ಲಿದ್ದು ಅಲ್ಲಿ ಯಾವುದೇ ಬೆಂಕಿ ಅವಘಡ ಆಗಿರುವ ಕುರುಹುಗಳು ಕಂಡು ಬಂದಿಲ್ಲ. ಮಾತ್ರವಲ್ಲದೆ ಒಲೆಯಲ್ಲಿ ಬೆಂಕಿಯೂ ಇರಲಿಲ್ಲ. ಒಲೆ ಇಲ್ಲದ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದರಿಂದ ಯಾರೋ ಉದ್ದೇಶಪೂರ್ವಕವಾಗಿ ಗುಡಿಸಲಿಗೆ ಬೆಂಕಿ ಹಚ್ಚಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ಈ ಕುರಿತು ಪದ್ಮಾವತಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net