

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಪಳ್ಳಿಗದ್ದೆಯಲ್ಲಿ ಮನೆಯೊಳಗೆ ಮಲಗಿದ್ದ ವೃದ್ಧೆಯೊಬ್ಬರ ಕಿವಿಯಿಂದ ಚಿನ್ನಾಭರಣಗಳನ್ನು ಕಳ್ಳರು ದರೋಡೆ ನಡೆಸಿದ್ದಾರೆ. ಮನೆಯ ಹಿಂಬಾಗಿಲ ಕಿಟಕಿಯ ಸರಳನ್ನು ಮುರಿದು ಅದೇ ಕಿಟಕಿಯ ಮೂಲಕ ಹಿಂಬಾಗಿಲು ತೆರೆದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಕೋಣೆಯೊಳಗೆ ಮಲಗಿದ್ದ ವೃದ್ಧ ತಾಯಿ ಐಸಮ್ಮ ಅವರ ಮೈಮೇಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ವೇಳೆ ಮಹಿಳೆಯ ಬಾಯಿಯನ್ನು ಬಲವಂತವಾಗಿ ಮುಚ್ಚಿದ್ದು, ಅವರು ಪ್ರಜ್ಞೆ ತಪ್ಪಿದ್ದರು. ಕಳ್ಳತನ ನಡೆದ ಘಟನೆ ಬೆಳಗ್ಗೆ ಬೆಳಕಿಗೆ ಬಂದಿದೆ. ವಿಟ್ಲ ಪಡ್ನೂರು ಗ್ರಾಮದ ಪಳ್ಳಿಗದ್ದೆ ನಿವಾಸಿ ಬಿ. ಎಂ. ಇಬ್ರಾಹಿಂ ಘಟನೆ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕಳ್ಳತನವಾದ ಆಭರಣಗಳ ಮೌಲ್ಯ ಸುಮಾರು 48 ಸಾವಿರ ರೂ. ಎಂದು ಅಂದಾಜಿಸಲಾಗಿದೆ.