

Hot Bedding : ಕೆನಡಾದಲ್ಲಿ ಜೀವನ ವೆಚ್ಚ ಹೆಚ್ಚಾಗುತ್ತಿದೆ. ಬಾಡಿಗೆ, ದಿನಸಿ ವಸ್ತುಗಳು ಮತ್ತು ಮೂಲಭೂತ ಅವಶ್ಯಕತೆಗಳು ಹೆಚ್ಚು ದುಬಾರಿಯಾಗುತ್ತಿದ್ದು, ವಲಸಿಗರು ಮತ್ತು ನಿವಾಸಿಗಳು ಬದುಕು ನಡೆಸುವುದು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ಜನರು ವಿವಿಧ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
37 ವರ್ಷದ ಮೋನಿಕ್ ಜೆರಾಮಿಯಾ ಎಂಬಾಕೆ ತನ್ನ ಜೀವನ ವೆಚ್ಚವನ್ನು ಸರಿದೂಗಿಸಲು ಒಂದು ಐಡಿಯಾ ಕಂಡುಕೊಂಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಮಹಾಮಾರಿ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಜೆರಾಮಿಯಾ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಳು. ಆದಾಯವಿಲ್ಲದೇ ಬದುಕು ನಡೆಸಲು ತುಂಬಾ ಕಷ್ಟವಾದ ಸಮಯದಲ್ಲಿ ಆಕೆ ಬಂದ ಒಂದೇ ಒಂದು ಐಡಿಯಾ ಇದೀಗ ಲಕ್ಷ ಲಕ್ಷ ಹಣವನ್ನು ಸಂಪಾದಿಸಲು ನೆರವಾಗಿದೆ.
ಕೋವಿಡ್ ಸಮಯದಲ್ಲೇ ಜೆರಾಮಿಯಾ ಅನಿರೀಕ್ಷಿತವಾಗಿ ತನ್ನ ಕೆಲಸ ಕಳೆದುಕೊಂಡಳು. ಇದರೊಂದಿಗೆ ಬಾಡಿಗೆ ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಬಹಳ ಚಿಂತೆಯಲ್ಲಿರುವಾಗ ಆಕೆಗೆ ಒಂದು ಐಡಿಯಾ ಬಂತು. ಅದೇನೆಂದರೆ, ತನ್ನ ಹಾಸಿಗೆಯನ್ನು ಹಂಚಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಜನರನ್ನು ಆಹ್ವಾನಿಸಿದಳು ಜೆರಾಮಿಯಾ. ಆಶ್ಚರ್ಯಕರರೀತಿಯಲ್ಲಿ ಆಕೆಯ ಪೋಸ್ಟ್ ಬೇಗನೆ ವೈರಲ್ ಆಯಿತು.
ಹಾಟ್ ಬೆಡ್ಡಿಂಗ್ ಎಂದು ಕರೆಯಲ್ಪಡುವ ಈ ಐಡಿಯಾದ ಮೂಲಕ ಆಕೆ ತಿಂಗಳಿಗೆ 50,000 ಡಾಲರ್ವರೆಗೂ ಸಂಪಾದಿಸಲು ಸಾಧ್ಯವಾಯಿತು. ತಾನು ಮತ್ತು ತಾನು ಹಾಸಿಗೆ ಹಂಚಿಕೊಳ್ಳಲು ಬರುವ ವ್ಯಕ್ತಿ ಇಬ್ಬರೂ ಪೂರ್ಣ ಒಪ್ಪಿಗೆಯನ್ನು ಹೊಂದಿದ್ದರೆ ಮಾತ್ರ ಅಪ್ಪುಗೆಯಂತಹ ಸ್ಪರ್ಶಗಳಿಗೆ ಅವಕಾಶ ನೀಡುತ್ತೇನೆ ಎಂದು ಯುವತಿ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಈ ಹಾಟ್ ಬೆಡ್ಡಿಂಗ್ ಕಲ್ಪನೆಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವು ಬಳಕೆದಾರರು ಇದು ಗೌಪ್ಯತೆ ಉಲ್ಲಂಘನೆ ಮತ್ತು ಸಂಭಾವ್ಯ ಅಪಾಯಗಳನ್ನು ಪ್ರಶ್ನಿಸಿದ್ದಾರೆ. ಕೆಲವರು ವೆಚ್ಚವನ್ನು ಉಳಿಸಲು ಕಂಡುಕೊಂಡ ಸೂತ್ರವನ್ನು ಮೆಚ್ಚುವವರೂ ಇದ್ದಾರೆ. ಆದರೆ, ಇದು ತುಂಬಾ ಅಪಾಯಕಾರಿ ಎಂದು ಅನೇಕ ಮಂದಿ ಹೇಳಿದ್ದಾರೆ. ಹಾಸಿಗೆ ಹಂಚಿಕೊಳ್ಳಲು ಬರುವವರೆಲ್ಲ ಒಳ್ಳೆಯವರಾಗಿರುವುದಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಾಟ್ ಬೆಡ್ಡಿಂಗ್ ಐಡಿಯಾ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)